ಕಟೀಲ್​ರನ್ನು ಭಯೋತ್ಪಾದಕ ಎನ್ನುವ ಮೋಸಗಾರ ಸಿದ್ದರಾಮಯ್ಯ ಜಮೀರ್ ಅಹ್ಮದ್​​ನಂಥವರನ್ನು ಬೆಳೆಸುತ್ತಾರೆ: ಕೆ ಎಸ್ ಈಶ್ವರಪ್ಪ

ಸಿದ್ದರಾಮಯ್ಯನಂಥ ಒಬ್ಬ ಮೋಸಗಾರ ಕಟೀಲ್ ಅವರಂಥ ರಾಷ್ಟ್ರಭಕ್ತನಿಗೆ ಉಗ್ರಗಾಮಿ ಅನ್ನದಿದ್ದರೆ ಮತ್ತೇನು ಅನ್ನಲು ಸಾಧ್ಯ ಎಂದು ಈಶ್ವರಪ್ಪ ಹೇಳಿದರು.

ಸಚಿವ ಕೆಎಸ್ ಈಶ್ವರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವು ಮುಂಗುಸಿಯ ಹಾಗೆ ಜಗಳವಾಡುತ್ತಿರುತ್ತಾರೆ. ಅವರ ನಡುವೆ ಪರಸ್ಪರ ನಿಂದನೆ, ಬಯ್ಯುವುದು, ಅರಚುವುದು, ಕೆಸರೆರಚುವುದು, ಮಣ್ಣೆರಚುವುದು ದಶಕಗಳಿಂದ ನಡೆದುಕೊಂಡು ಬಂದಿದೆ. ಮಂಗಳವಾರ ಕಲಬುರಗಿಯಲ್ಲಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಈಶ್ವರಪ್ಪನವರು ಮಾಧ್ಯಮದವರೊಂದಿಗೆ ಬೇರೆ ವಿಷಯಗಳನ್ನು ಕುರಿತು ಮಾತಾಡಿದರಾದರೂ, ಸಿದ್ದರಾಮಯ್ಯನವರ ಬಗ್ಗೆ ಅವರು ಹೇಳಿದ್ದು ಸ್ವಾರಸ್ಯಕರವಾಗಿತ್ತು. ಪತ್ರಕರ್ತರೊಬ್ಬರು ಸಿದ್ದರಾಮಯ್ಯ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭಯೋತ್ಪಾದಕ ಅಂತ ಕರೆದಿದ್ದಾರೆ ಅಂತ ಹೇಳಿದಾಗ ಈಶ್ವರಪ್ಪನವರು ಮಾಜಿ ಮುಖ್ಯಮಂತ್ರಿಗಳ ಮೇಲೆ ಹರಿಹಾಯ್ದರು.

ಸಿದ್ದರಾಮಯ್ಯನವರು ಹೆಂಡ ಕುಡಿದಾಗ ಒಂದು ಕುಡಿದೇ ಇರುವಾಗ ಮತ್ತೊಂದು ಮಾತಾಡುತ್ತಾರೆ. ನಮ್ಮ ರಾಜ್ಯಾಧ್ಯಕ್ಷ ಕಟೀಲ್ ಸಜ್ಜನರು, ನೇರವಂತಿಕೆಯ ರಾಜಕಾರಣಿ ಮತ್ತು ಅದಕ್ಕೂ ಮಿಗಿಲಾಗಿ ಒಬ್ಬ ರಾಷ್ಟ್ರಪ್ರೇಮಿ. ಅಂಥ ವ್ಯಕ್ತಿಯನ್ನು ಸಿದ್ದರಾಮಯ್ಯ ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ, ವಿರೋಧಪಕ್ಷದ ನಾಯಕನಾಗಿದ್ದುಕೊಂಡು ಭಯೋತ್ಪಾದಕ ಅಂತ ಕರೆಯುತ್ತಾರೆಂದರೆ ಅವರಿಗೆ ಬುದ್ಧಿ ಭ್ರಮಣೆ ಆಗಿದೆ ಎಂದೇ ಅರ್ಥ ಅಂತ ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ, ಅವರ ರಕ್ತದ ಪ್ರತಿಕಣದಲ್ಲೂ ಮೋಸ ಅಡಗಿದೆ. ಜೆಡಿಎಸ್ ಪಕ್ಷಕ್ಕೆ ಮೋಸ ಮಾಡಿ ಅಲ್ಲಿಂದ ಹೊರಬಂದು ಕಾಂಗ್ರೆಸ್ ಪಕ್ಷ ಸೇರಿದರು. ಕಾಂಗ್ರೆಸ್ ಪಕ್ಷ ಅವರಿಗೆ ಮುಖ್ಯಮಂತ್ರಿ ಇಲ್ಲವೇ ವಿರೋಧ ಪಕ್ಷದ ನಾಯಕನ ಸ್ಥಾನ ನೀಡದಿದ್ದರೆ ಅದಕ್ಕೂ ಮೋಸ ಮಾಡಿ ಹೊರಬರುತ್ತಾರೆ. ಶ್ರೀನಿವಾಸ್ ಪ್ರಸಾದ್ ಅವರಂಥ ಹಿರಿಯ ನಾಯಕನಿಗೂ ಅವರು ಮೋಸ ಮಾಡಿದ್ದಾರೆ.

ಸಿದ್ದರಾಮಯ್ಯನಂಥ ಒಬ್ಬ ಮೋಸಗಾರ ಕಟೀಲ್ ಅವರಂಥ ರಾಷ್ಟ್ರಭಕ್ತನಿಗೆ ಉಗ್ರಗಾಮಿ ಅನ್ನದಿದ್ದರೆ ಮತ್ತೇನು ಅನ್ನಲು ಸಾಧ್ಯ ಎಂದು ಈಶ್ವರಪ್ಪ ಹೇಳಿದರು.

ಕಟೀಲ್ ಅವರಂಥ ರಾಜ್ಯಾಧ್ಯಕ್ಷ ಸಿಕ್ಕಿದ್ದು ನಮ್ಮ ಪುಣ್ಯ, ಅಂಥವರಿಗೆ ಭಯೋತ್ಪಾದಕ ಅಂತ ಕರೆಯವ ಸಿದ್ದರಾಮಯ್ಯನವರರ ಜಮೀರ್ ಅಹ್ಮದ್ನಂಥವರನ್ನು ಬೆಳೆಸುತ್ತಾರೆ ಎಂದು ಈಶ್ವರಪ್ಪ ಕಿಡಿಕಾರಿದರು.

ಇದನ್ನೂ ಓದಿ:  Shardul Thakur: ದೀರ್ಘಕಾಲದ ಗೆಳತಿಯೊಂದಿಗೆ ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ; ವಿಡಿಯೋ

Click on your DTH Provider to Add TV9 Kannada