ಸಿದ್ದರಾಮಯ್ಯ ಯಾವತ್ತೂ ಕೀಳುಮಟ್ಟದ ರಾಜಕಾರಣ ಮಾಡಿದವರಲ್ಲ ಎಂದರು ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್
ಸಿದ್ದರಾಮಯ್ಯನವರನ್ನು ಪ್ರತ್ಯೇಕ ಹೊಗಳಿಕೆಗೆ ಆರಿಸಿಕೊಂಡ ಯತ್ನಾಳ್, ಅವರು ಯಾವತ್ತೂ ಹಲ್ಕಾ ರಾಜಕಾರಣ ಮಾಡಿದವರಲ್ಲ. ಅವರು ತೂಕದ ರಾಜಕಾರಣಿ, ಅಂತ ಹೇಳಿದರು.
ವಿಜಯಪುರ: ಕರ್ನಾಟಕ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ, ಒಂದೆರಡು ದಿನಗಳಿಂದ ನಾವು ಬದಲಾವಣೆಗಳನ್ನು ಗಮನಿಸುತ್ತಿದ್ದೇವೆ. ಮೊನ್ನೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ (BS Yediyurappa) ಮನಸಾರೆ ಗುಣಗಾನ ಮಾಡಿದರು. ಬಿ ಎಸ್ ವೈ ಅವರು ಸೆಕ್ಯುಲರ್ (secular) ಮನೋಭಾವದವರು, ಅವರು ಸಿಎಮ್ ಆಗಿದ್ದಾಗ ಒಂದೇ ಒಂದು ಕೋಮು ಗಲಭೆ ಆಗಿರಲಿಲ್ಲ, ಹಿ ಈಸ್ ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಎಂದು ಹೇಳಿದ್ದರು. ಆಮೇಲೆ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಸಾವು, ಕಾಂಗ್ರೆಸ್ ಪ್ರತಿಭಟನೆ, ಗುರುವಾರ ಸಾಯಂಕಾಲ ಸಚಿವ ಕೆ ಎಸ್ ಈಶ್ವರಪ್ಪನವರಿಂದ ರಾಜೀನಾಮೆ ನೀಡುವ ಘೋಷಣೆ ಮತ್ತು ಇಂದು ಅಂದರೆ ಶುಕ್ರವಾರ ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಅವರಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮುಕ್ತ ಪ್ರಶಂಸೆ!!
ಕಾಂಗ್ರೆಸ್ ಪ್ರಮುಖ ನಾಯಕರು ತಮ್ಮ ವಿರುದ್ಧ ಹಗುರವಾಗಿ ಮಾತಾಡುವ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ; ಮೊದಲು ರಮೇಶ್ ಜಾರಕಿಹೊಳಿ ಈಗ ಈಶ್ವರಪ್ಪ ಅಂತ ವಿಜಯಪುರದಲ್ಲಿ ಮಾಧ್ಯಮದವರು ಕೇಳಿದಾಗ ಯತ್ನಾಳ್ ಅವರು ಕೆಲ ಕಾಂಗ್ರೆಸ್ ನಾಯಕರು ಹತಾಷರಾಗಿದ್ದಾರೆ ಅಂತ ಹೇಳಿದರಾದರೂ, ಕರ್ನಾಟಕ ಸುಸಂಸ್ಕೃತ ರಾಜಕಾರಣಕ್ಕೆ ಹೆಸರಾಗಿದೆ, ಹಿಂದೆ ಎಸ್ ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ದೇವರಾಜ ಅರಸು ಮತ್ತು ಎಸ್ ಎಂ ಕೃಷ್ಟ ಅವರಂಥ ಧೀಮಂತ ನಾಯಕರ ಸರ್ಕಾರಗಳನ್ನು ನಡೆಸಿದ್ದು ನಾವು ನೋಡಿದ್ದೇವೆ ಎಂದು ಹೇಳಿದರು.
ಸಿದ್ದರಾಮಯ್ಯನವರನ್ನು ಪ್ರತ್ಯೇಕ ಹೊಗಳಿಕೆಗೆ ಆರಿಸಿಕೊಂಡ ಯತ್ನಾಳ್, ಅವರು ಯಾವತ್ತೂ ಹಲ್ಕಾ ರಾಜಕಾರಣ ಮಾಡಿದವರಲ್ಲ. ನಾವು ಅವರನ್ನು ಟೀಕೆ ಮಾಡುತ್ತೇವೆ ಅವರು ನಮ್ಮನ್ನು ಟೀಕಿಸುತ್ತಾರೆ, ಇದು ರಾಜಕೀಯದಲ್ಲಿ ಮಾಮೂಲು, ಅವರು ತೂಕದ ರಾಜಕಾರಣಿ, ಅಂತ ಹೇಳಿದರು.
ಇದನ್ನೂ ಓದಿ: ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಚಿತ್ರಹಿಂಸೆ ನೀಡುವ ಮನುಷ್ಯ ಈಶ್ವರಪ್ಪ ಅಲ್ಲ: ಬಸನಗೌಡ ಪಾಟೀಲ ಯತ್ನಾಳ್