ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಚಿತ್ರಹಿಂಸೆ ನೀಡುವ ಮನುಷ್ಯ ಈಶ್ವರಪ್ಪ ಅಲ್ಲ: ಬಸನಗೌಡ ಪಾಟೀಲ ಯತ್ನಾಳ್

ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಚಿತ್ರಹಿಂಸೆ ನೀಡುವ ಮನುಷ್ಯ ಈಶ್ವರಪ್ಪ ಅಲ್ಲ: ಬಸನಗೌಡ ಪಾಟೀಲ ಯತ್ನಾಳ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Apr 12, 2022 | 5:55 PM

ಈಶ್ವರಪ್ಪ 40 ಪರ್ಸೆಂಟ್ ಲಂಚ ಕೇಳಿದ ಬಗ್ಗೆ ಸಂತೋಷ್ ದೂರಿದ್ದರು. ಅದು ಹೇಗೆ ಸಾಧ್ಯ? ರಾಜಕಾರಣಿಯೊಬ್ಬನಿಗೆ 40% ಕಮೀಷನ್ ಕೊಟ್ಟರೆ ಉಳಿದ ಶೇ. 60 ರಲ್ಲಿ ಕಾಮಗಾರಿಗಳನ್ನು ಪೂರ್ತಿಗೊಳಿಸುವುದು ಅಸಾಧ್ಯ ಎಂದು ಯತ್ನಾಳ್ ಹೇಳಿದರು.

ವಿಜಯಪುರ: ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಔಟ್ ಸ್ಪೋಕನ್ ಶಾಸಕ ಬಸನಗೌಡ ಪಾಟೀಲ (Basangouda Patil Yatnal) ಡೆತ್ ನೋಟ್ ಹೆಸರಿಸಲಾಗಿರುವ ಸಚಿವ ಕೆ ಎಸ್ ಈಶ್ವರಪ್ಪನವರ (KS Eshwarappa) ಪರ ವಕಾಲತ್ತು ಮಾಡಿ ಮಾತಾಡಿದ್ದಾರೆ. ಮಂಗಳವಾರ ವಿಜಯಪುರನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್, ಈಶ್ವರಪ್ಪ ಸ್ವಲ್ಪ ಜಾಸ್ತಿ ಮಾತಾಡುವುದು ನಿಜವಾದರೂ ವ್ಯಕ್ತಿಯೊಬ್ಬನನ್ನು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಚಿತ್ರಹಿಂಸೆ ನೀಡುವ ಮನುಷ್ಯ ಅಲ್ಲ ಎಂದು ಹೇಳಿದರು. ಸಂತೋಷ ಪಾಟೀಲ ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ತನಿಖೆಯ ಮೂಲಕ ಸಾಬೀತಾಗಬೇಕು. ಅವರು ಬದುಕು ಕೊನೆಗಾಣಿಸಿಕೊಳ್ಳಲು ಹಲವಾರು ಕಾರಣಗಳಿರಬಹುದು. ಸಾಲ-ಸೋಲ ಮಾಡಿಕೊಂಡಿರಬಹುದು, ಕೌಟುಂಬಿಕ ಸಮಸ್ಯೆಗಳಿರಬಹುದು ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಯತ್ನಾಳ್ ಹೇಳಿದರು.

ಈಶ್ವರಪ್ಪ 40 ಪರ್ಸೆಂಟ್ ಲಂಚ ಕೇಳಿದ ಬಗ್ಗೆ ಸಂತೋಷ್ ದೂರಿದ್ದರು. ಅದು ಹೇಗೆ ಸಾಧ್ಯ? ರಾಜಕಾರಣಿಯೊಬ್ಬನಿಗೆ 40% ಕಮೀಷನ್ ಕೊಟ್ಟರೆ ಉಳಿದ ಶೇ. 60 ರಲ್ಲಿ ಕಾಮಗಾರಿಗಳನ್ನು ಪೂರ್ತಿಗೊಳಿಸುವುದು ಅಸಾಧ್ಯ ಎಂದು ಯತ್ನಾಳ್ ಹೇಳಿದರು. ಸರ್ಕಾರದಲ್ಲಿ ಎಲ್ಲರೂ ಹರಿಶ್ಚಂದ್ರನ ವಂಶಸ್ಥರು ಅಂತ ನಾನು ಹೇಳುತ್ತಿಲ್ಲ. ಅದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಯಾರೂ ಕೇಳುವುದಿಲ್ಲ ಅಂತ ಹೇಳುವ ಮೂಲಕ ಯತ್ನಾಳ್ ಅವರು ಸರ್ಕಾರ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತದೆ ಅನ್ನೋದನ್ನು ಅಂಗೀಕರಿಸಿದರೆ?

ಈ ಸಂದರ್ಭದಲ್ಲಿ ಯತ್ನಾಳ್ ಅವರು ಆರ್ ಟಿ ಐ ಕಾರ್ಯಕರ್ತರನ್ನು ಉಲ್ಲೇಖಿಸಿ ಸರ್ಕಾರಿ ಅಧಿಕಾರಿಗಳನ್ನು ರಾಜಕಾರಣಿಗಳನ್ನು ಬ್ಲ್ಲಾಕ್ ಮೇಲ್ ಮಾಡಿ ಹಣ ಪೀಕುವುದೇ ಅವರ ಉದ್ಯೋಗವಾಗಿದೆ ಎಂದು ಹೇಳಿದರು. ಎಲ್ಲೋ ಒಬ್ಬಿಬ್ಬ ಆರ್ ಟಿ ಐ ಕಾರ್ಯಕರ್ತರು ಸಾಚಾ ಆಗಿರಬಹುದು, ಅದರೆ ಉಳಿದವರು ಸಮಾಜಕ್ಕೆ ಪಿಡುಗಾಗಿದ್ದಾರೆ ಎಂದು ಯತ್ನಾಳ್ ಹೇಳಿದರು.

ಡೆತ್ ನೋಟ್ ನಲ್ಲಿ ಬರೆದಿರುವುದೆಲ್ಲ ಹಲವಾರು ಬಾರಿ ಪ್ರೂವ್ ಆಗೋದಿಲ್ಲ. ಹಾಗಾಗಿ ಸಂತೋಷ್ ಡೆತ್ ನೋಟ್ ನಲ್ಲಿ ಬರೆದಿರುವುದೆಲ್ಲ ಸತ್ಯ ಅಂತ ಭಾವಿಸುವ ಅವಶ್ಯಕತೆಯಿಲ್ಲ ಎಂದು ಅವರು ಹೇಳಿದರು.

ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ನಮ್ಮ ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನ ಮಂತ್ರಿಯಾಗಿದ್ದಾರೆ. ‘ನಾ ಖಾವುಂಗಾ ನಾ ಖಾನೆ ದೂಂಗಾ,’ ಅಂತ ಹೇಳಿರುವ ಅವರು ಅದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದು ಅತ್ಯಂತ ಪ್ರಾಮಾಣಿಕವಾಗಿ ಸರ್ಕಾರ ನಡೆಸುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಅಂತ ಕಂಡುಬಂದರೆ ಅವರು, ಈಶ್ವರಪ್ಪ, ಯತ್ನಾಳ್ ಅಥವಾ ಬೊಮ್ಮಾಯಿಯನ್ನೂ ಬಿಡೋದಿಲ್ಲ.

ರಾಜ್ಯದಲ್ಲಿ ಮುಖ್ಯಮಂತ್ರಿ ಯಾಕೆ ಬದಲಾಯಿಸಲಾಯಿತು ಅಂತ ಎಲ್ಲರಿಗೂ ಗೊತ್ತಿದೆ ಅಂತ ಅವರು ಮಾರ್ಮಿಕವಾಗಿ ಹೇಳಿದರು.

ಇದನ್ನೂ ಓದಿ:  ಸಂತೋಷ್ ಸಾವು ಪ್ರಕರಣ: ಪ್ರಾಥಮಿಕ ವರದಿ ಸಿಕ್ಕ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಎಂದರು ಮುಖ್ಯಮಂತ್ರಿ ಬೊಮ್ಮಾಯಿ

Published on: Apr 12, 2022 05:54 PM