ಗಣೇಶನ ದೇವಸ್ಥಾನದಲ್ಲಿ ದೇವರ ಬಲಗಡೆಯಿಂದ ಹೂವಿನ ಪ್ರಸಾದ ಸಿಕ್ಕು ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ ಈಶ್ವರಪ್ಪ
ಶುಕ್ರವಾರ ಬೆಳಗ್ಗೆ ಸಚಿವರು ತೇವರ ಚಟ್ಟಹಳ್ಳಿಯ ಶುಭಶ್ರೀ ಸಮುದಾಯ ಭವನದ ಉದ್ಘಾಟನೆ ಮಾಡುವ ಮೊದಲು ಅವರಣದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವಾಗ ವಿನಾಯಕನ ಬಲಭಾಗದಿಂದ ಹೂವಿನ ಪ್ರಸಾದ ಬಿದ್ದಿದೆಯಂತೆ.
ಶಿವಮೊಗ್ಗ: ಶುಕ್ರವಾರದದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ ಎಸ್ ಈಶ್ವರಪ್ಪನವರು ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಮೊದಲು ಖುಷಿಯಲ್ಲಿದ್ದರು. ಹೌದು ಮಾರಾಯ್ರೇ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ತೆರಳುವ ಮೊದಲು ಸಹ ಬಹಳ ಸಂತೋಷದಲ್ಲಿದ್ದರು. ಅದು ಯಾಕೆ ಅವರೊಂದಿಗಿದ್ದ ಮಾಧ್ಯಮದವರಿಗೂ ಗೊತ್ತಿತ್ತು. ರಾಜಧಾನಿಗೆ ತೆರಳುವ ತರಾತುರಿಯಲ್ಲಿದ್ದ ಈಶ್ವರಪ್ಪ ಮಾಧ್ಯಮದವರೊಂದಿಗೆ ಚುಟುಕಾಗಿ ಮಾತಾಡಿ ತಮ್ಮ ಸಂತೋಷದ ಕಾರಣ ತಿಳಿಸಿದರು. ಹಾಗೆ ನೋಡಿದರೆ, ಅವರ ಖುಷಿಯ ಕಾರಣವನ್ನು ಮಾಧ್ಯಮದವರೇ ವಿವರಣೆ ನೀಡುತ್ತಾ ಪ್ರಶ್ನೆ ಕೇಳಿದರು.
ವಿಷಯ ಏನೆಂದರೆ, ಶುಕ್ರವಾರ ಬೆಳಗ್ಗೆ ಸಚಿವರು ತೇವರ ಚಟ್ಟಹಳ್ಳಿಯ ಶುಭಶ್ರೀ ಸಮುದಾಯ ಭವನದ ಉದ್ಘಾಟನೆ ಮಾಡುವ ಮೊದಲು ಅವರಣದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವಾಗ ವಿನಾಯಕನ ಬಲಭಾಗದಿಂದ ಹೂವಿನ ಪ್ರಸಾದ ಬಿದ್ದಿದೆಯಂತೆ. ನಮಗೆಲ್ಲ ಗೊತ್ತಿದೆ, ಯಾವುದೇ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವಾಗ ಹೂವಿನ ಪ್ರಸಾದ ಬಲಗಡೆಯಿಂದ ಬಿದ್ದರೆ ಅದನ್ನು ಶುಭಸೂಚಕ ಎಂದು ಪರಿಗಣಿಸಲಾಗುತ್ತದೆ.
ಇದೇ ವಿಷಯಕ್ಕೆ ಬಹಳ ಸಂತೋಷದಲ್ಲಿದ್ದ ಈಶ್ವರಪ್ಪನವರು, ನಾನು ಭಾರತದ ನಾನಾಭಾಗಗಳಲ್ಲಿರುವ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ ಪೂಜೆ ಸಲ್ಲಿಸಿದ್ದೇನೆ, ಮತ್ತು ಕೆಲವು ದೇವಸ್ಥಾನಗಳಲ್ಲಿ ದೇವರ ಬಲಗಡೆಯಿಂದ ಬಿದ್ದ ಹೂವಿನ ಪ್ರಸಾದ ಸಿಕ್ಕಿದೆ. ಆದರೆ ಚಟ್ನಹಳ್ಳಿಯ ದೇವಸ್ಥಾನದಲ್ಲಿ ಗಣೇಶನ ಬಲಭಾಗದಿಮದ ಒಂದೇ ಸಮನೆ ದಬದಬ ಅಂತ ಹೂವಿನ ಪ್ರಸಾದ ಉದುರಿತು. ನನ್ನ ಬದುಕಿನಲ್ಲಿ ನಾನ್ಯಾವತ್ತೂ ಅಂಥ ಪ್ರಸಾದ ನೋಡಿರಲಿಲ್ಲ, ಜೊತೆಯಲ್ಲಿದ್ದವರು ಸಹ ಅದನ್ನು ಕಂಡು ಬಹಳ ಸಂತೋಷಪಟ್ಟರು. ಇದರ ಅರ್ಥ ನಾವು ನ್ಯಾಯಯುತವಾಗಿದ್ದೇವೆ, ಧರ್ಮಕ್ಕೆ ಜಯ ಸಿಗುತ್ತೆ ಅನ್ನೋದಿಕ್ಕೆ ಗಣಪತಿ ನೀಡಿರುವ ಪ್ರಸಾದವೇ ಸಾಕ್ಷಿ ಎಂದು ಅವರು ಹೇಳಿದರು.