ಸಾಕ್ಷ್ಯಾಧಾರಕ್ಕಾಗಿ ಸಿದ್ದರಾಮಯ್ಯನವರ ಪುತ್ರನ ಪೋಟೋ ಬಳಸಿರಬಹುದು ಅದರಲ್ಲಿ ತಪ್ಪೇನೂ ಇಲ್ಲ: ಬಿ ಎಸ್ ಯಡಿಯೂರಪ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2021 | 10:55 PM

. ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಪಕ್ಷಾತೀತವಾಗಿ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅಂತ ಪ್ರಧಾನ ಮಂತ್ರಿ ಅವರು ಸ್ಪಷ್ಟ ಸೂಚನೆ ನೀಡಿರುವುದರಿಂದ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಎಡಿಯೂರಪ್ಪ ನವರು ಹೆಚ್ಚು ಸುದ್ದಿಯಲ್ಲಿರುವುದಿಲ್ಲ. ಮಾಧ್ಯಮಗಳಿಗೆ ಅವರು ಮಾತಿಗೆ ಸಿಕ್ಕುವುದು ಬಹಳ ಕಡಿಮೆಯಾಗಿಬಿಟ್ಟಿದೆ. ಆದರೆ, ಪಕ್ಷ ಮತ್ತು ಸರ್ಕಾರದ ಬಗ್ಗೆ ಯಾವುದೇ ಪ್ರಶ್ನೆ ಎದ್ದಾಗ ಅವರು ಉಳಿದವರಿಗಿಂತ ಮೊದಲು ಹ್ಯಾಂಡಲ್ ಮಾಡಲು ಮುಂದಾಗುತ್ತಾರೆ. ಶುಕ್ರವಾರ ನಡೆದಿದ್ದು ಅದೇ. ಬಿಟ್ ಕಾಯಿನ್ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕೆಸರೆರಚಾಟ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ದಿವಂಗತ ಪುತ್ರ ರಾಕೇಶ್ ಅವರನ್ನು ಒಂದು ಹಳೆಯ ಪೋಟೋವನ್ನು ಬಳಸಿ ಈ ಪ್ರಕರಣಕ್ಕೆ ಎಳೆತಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ಸಹಜವಾಗೇ ಕೋಪ ತರಿಸಿದೆ ಮತ್ತು ಮಾಧ್ಯಮಗಳಲ್ಲಿ ಚರ್ಚೆಯೂ ಅಗುತ್ತಿದೆ.

ಸುದ್ದಿಗೋಷ್ಟಿ ಅರಂಭವಾಗುತ್ತಿದ್ದಂತೆಯೇ ಮಾಧ್ಯಮದವರು ಅದೇ ಪ್ರಶ್ನೆಯನ್ನು ಮೊದಲು ಕೇಳಿದರು. ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಪಕ್ಷಾತೀತವಾಗಿ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅಂತ ಪ್ರಧಾನ ಮಂತ್ರಿ ಅವರು ಸ್ಪಷ್ಟ ಸೂಚನೆ ನೀಡಿರುವುದರಿಂದ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

ಮಾಧ್ಯಮದವರು ಪುನಃ ಅದೇ ಪ್ರಶ್ನೆಯನ್ನು ಕೇಳಿದಾಗ ಸ್ವಲ್ಪ ಅಸಮಾಧಾನಗೊಂಡ ಅವರು, ಸಿದ್ದರಾಮಯ್ಯನವರ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ನಡೆಸಿದ ಹಗರಣಗಳೆಲ್ಲ ಇಡೀ ವಿಶ್ವಕ್ಕೆ ಗೊತ್ತಿದೆ. ಒಂದು ಪ್ರಕರಣದ ತನಿಖೆಯಾಗುವಾಗ ಪುರಾವೆಗಳಿಗಾಗಿ ಪೋಟೋ ಇಲ್ಲವೆ ಬೇರೆ ದಾಖಲೆಗಳನ್ನು ಬಳಸಬೇಕಾಗುತ್ತದೆ, ಅದರಲ್ಲಿ ತಪ್ಪೇನೂ ಇಲ್ಲ ಅಂತ ಸರ್ಕಾವನ್ನು ಸಮರ್ಥಿಸಿಕೊಂಡರು.

ಹಾನಗಲ್ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಎದುರಾದ ಹಿನ್ನಡೆಯನ್ನು ಅಂಗೀಕರಿಸಿದ ಮಾಜಿ ಮುಖ್ಯಮಂತ್ರಿಗಳು, ಸಮನ್ವಯತೆಯಲ್ಲಿ ಕೊರತೆಯಾಗಿರಬಹುದು, ಆದರೆ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಅದನ್ನು ಸರಿಪಡಿಸಿಕೊಂಡು ಕನಿಷ್ಟ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ತಮ್ಮ ಮೇಲೆ ಕಡಿವಾಣ ಹಾಕಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಬಿ ಎಸ್ ವೈ ತಮ್ಮ ಪಕ್ಷ ಸಾಮೂಹಿಕ ನಾಯಕತ್ವದೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಹೇಳಿದರು.

ಇದನ್ನೂ ಓದಿಚಿಕ್ಕಬಳ್ಳಾಪುರ: ದೇವಸ್ಥಾನದಲ್ಲಿ ನಿಗೂಢ ಸಾವು ಪ್ರಕರಣ; ಸಾಯುವುದಕ್ಕೂ ಮುನ್ನ ಮಾಡಿರುವ ವಿಡಿಯೋ ವೈರಲ್