ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ

Updated By: ವಿವೇಕ ಬಿರಾದಾರ

Updated on: Jul 28, 2025 | 7:57 PM

ಲಕ್ಷಾಂತರ ಆದಾಯವಿರುವ ರಾಮು ಅವರು ತಮ್ಮ ಮಗನ ಮದುವೆಯನ್ನು ಅತ್ಯಂತ ಸರಳವಾಗಿ ಮಾಡಿದರು. ಆದರೆ, ಅದೇ ಹಣವನ್ನು ಬಳಸಿ 11 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿದರು. ಸೀರೆ, ಬಟ್ಟೆ, ಚಿನ್ನದ ತಾಳಿ ಮತ್ತು 10,000 ರೂಪಾಯಿ ನಗದನ್ನು ಪ್ರತಿ ಜೋಡಿಗೂ ನೀಡಿದರು. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಡಂಬರದ ಮದುವೆಗಳಿಗೆ ಹೋಲಿಸಿದರೆ, ಇದು ನಿಜವಾದ ಪ್ರೇರಣೆಯಾಗಿದೆ.

ಸಾಲ ಮಾಡಿ, ಆಸ್ತಿ ಮಾರಿ ಆಡಂಬರದ ಮದುವೆ ಮಾಡುವವರ ನಡುವೆ ಲಕ್ಷ ಲಕ್ಷ ಆದಾಯವಿದ್ದರೂ ಮಗನ ಮದುವೆಯನ್ನು ಸರಳವಾಗಿ ಮಾಡಿ, 11 ಬಡ ಕುಟುಂಬದ ಜೋಡಿಗಳಿಗೆ ಮದುವೆ ಮಾಡಿಸಿ ರಾಮು ಮಾದರಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಂಬಳಿಪುರದ ಕಾಟೇರಮ್ಮ ದೇವಾಲಯದಲ್ಲಿ ರಾಮು ಎಂಬುವರು ಮಗನ ಮದುವೆ ಜೊತೆಗೆ ಒಂದೇ ವೇದಿಕೆಯಲ್ಲಿ 11 ಜೋಡಿಗಳಿಗೆ ಮದುವೆ ಮಾಡಿಸಿದ್ದಾರೆ. ಮಗನ ಮದುವೆ ಹಣದ ಖರ್ಚಿನಲ್ಲೇ 11 ದಂಪತಿಗಳಿಗೆ ಸೀರೆ, ಬಟ್ಟೆ, ಚಿನ್ನದ ತಾಳಿ ಜೊತೆಗೆ 10 ಸಾವಿರ ನಗದು ಹಣವನ್ನ ನೀಡಿ ಶುಭ ಕೋರಿದ್ದಾರೆ. ಕಾಟೇರಮ್ಮ ದೇವಾಲಯದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ವೇದ-ಮಂತ್ರ ಘೋಷದೊಂದಿಗೆ ಶಾಸ್ತ್ರೋಸ್ತ್ರವಾಗಿ ಸಾಮೂಹಿಕ ವಿವಾಹ ನೆರವೇರಿತು. ಮದುವೆಗೆ ಬಂದವರಿಗೆ ಹೋಳಿಗೆ ಊಟ ಮಾಡಿಸಿದರು. ಸಾಲ ಮಾಡಿಯಾದ್ರು ಸರಿ ಅದ್ದೂರಿಯಾಗಿ ಆಡಂಬರದ ಮದುವೆ ಮಾಡಬೇಕು ಅಂದುಕೊಳ್ಳುವವರ ನಡುವೆ ಮಗನ ಮದುವೆಯನ್ನು ಸರಳವಾಗಿ ಮಾಡಿದ್ದು, ಅಲ್ಲದೆ ಅದೇ ಖರ್ಚಿನಲ್ಲಿ 11 ನವ ಜೋಡಿಗಳಿಗೆ ಕಂಕಣ ಭಾಗ್ಯ ನೀಡಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published on: Jul 28, 2025 07:52 PM