ಆಸೀಸ್ ವಿರುದ್ಧ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ಸ್ಮೃತಿ ಮಂಧಾನ
Smriti Mandhana's Record Century: ಭಾರತದ ಸ್ಮೃತಿ ಮಂಧಾನ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 117 ರನ್‌ಗಳ ಅದ್ಭುತ ಶತಕ ಬಾರಿಸಿದ್ದಾರೆ. ಇದು ಅವರ 12ನೇ ಏಕದಿನ ಶತಕವಾಗಿದೆ. ಎರಡು ಕ್ಯಾಲೆಂಡರ್ ವರ್ಷಗಳಲ್ಲಿ ಮೂರು ಅಥವಾ ಹೆಚ್ಚು ಶತಕಗಳನ್ನು ಬಾರಿಸಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. 2025ರಲ್ಲಿ ಅವರು ಈಗಾಗಲೇ ಮೂರು ಶತಕಗಳನ್ನು ಬಾರಿಸಿದ್ದಾರೆ. ಇದರಿಂದಾಗಿ ಭಾರತ ತಂಡ ಗೆಲುವು ಸಾಧಿಸಿದೆ.
ಆಸ್ಟ್ರೇಲಿಯಾ ವನಿತಾ ತಂಡದ ವಿರುದ್ಧ ಇಂದು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ದಾಖಲೆಯ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂಧಾನ 91 ಎಸೆತಗಳಲ್ಲಿ 14 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ117 ರನ್‌ಗಳನ್ನು ಗಳಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 12 ನೇ ಶತಕವಾಗಿದ್ದು, ಈ ಶತಕದೊಂದಿಗೆ ಅವರ ಅಪರೂಪದ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.
ವಾಸ್ತವವಾಗಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಎರಡು ಕ್ಯಾಲೆಂಡರ್ ವರ್ಷಗಳಲ್ಲಿ ಮೂರು ಅಥವಾ ಹೆಚ್ಚಿನ ಶತಕಗಳನ್ನು ಬಾರಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸ್ಮೃತಿ ಮಂಧಾನ ಪಾತ್ರರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಈ ಮೊದಲು ಬೇರೆ ಯಾವುದೇ ಮಹಿಳಾ ಆಟಗಾರ್ತಿ ಈ ಸಾಧನೆ ಮಾಡಿರಲಿಲ್ಲ. ಮಂಧಾನ ಈಗಾಗಲೇ 2025 ರಲ್ಲಿ ಒಟ್ಟು ಮೂರು ಏಕದಿನ ಶತಕಗಳನ್ನು ಬಾರಿಸಿದ್ದು, 2024 ರಲ್ಲಿ ಅವರು ನಾಲ್ಕು ಏಕದಿನ ಶತಕಗಳನ್ನು ಸಿಡಿಸಿದ್ದರು.
ಇನ್ನು 2025 ರಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಸ್ಮೃತಿ ಮಂಧಾನಾ ಇಲ್ಲಿಯವರೆಗೆ 13 ಪಂದ್ಯಗಳಲ್ಲಿ ಮೂರು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿದಂತೆ ಒಟ್ಟು 803 ರನ್ ಗಳಿಸಿದ್ದಾರೆ. ಈ ಮೂಲಕ 2025 ರಲ್ಲಿ ಮಹಿಳೆಯರ ಪರ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರ್ತಿಯೂ ಆಗಿದ್ದಾರೆ. ಭಾರತದ ಪ್ರತೀಕಾ ರಾವಲ್ 658 ರನ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2013 ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಸ್ಮೃತಿ ಮಂಧಾನ ಇಲ್ಲಿಯವರೆಗೆ ಆಡಿರುವ 107 ಪಂದ್ಯಗಳಲ್ಲಿ 12 ಶತಕಗಳು ಮತ್ತು 32 ಅರ್ಧಶತಕಗಳು ಸೇರಿದಂತೆ ಒಟ್ಟು 4763 ರನ್ ಗಳಿಸಿದ್ದಾರೆ.

