ಮಂಗಳೂರು ಕೆತ್ತಿಕಲ್ ಬಳಿ ಗುಡ್ಡದಿಂದ ಸುರಿಯುತ್ತಿರುವ ಮಣ್ಣು, ಕುಸಿತದ ಅಪಾಯ ಅಲ್ಲಗಳೆಯುವಂತಿಲ್ಲ
ಈ ಭಾಗದಲ್ಲಿ ಮಳೆ ಸುರಿಯುವುದು ನಿಂತಿರುವುದರಿಂದ ವಾಹನ ಸವಾರರು ಕೊಂಚ ಧೈರ್ಯದಿಂದ ಓಡಾಡುತ್ತಿದ್ದಾರೆ. ಅದರೆ ಮೇಲಿಂದ ಮಣ್ಣು ಸುರಿಯುತ್ತಿರುವ ಕಾರಣ ಗುಡ್ಡದ ಆ ನಿರ್ದಿಷ್ಟ ಭಾಗಗಳು ಶಿಥಿಲಗೊಂಡು ಕುಸಿಯುವ ಅಪಾಯವನ್ನು ಅಲ್ಲಗಳೆಯಲಾಗದು. ಶಿರೂರು ಗುಡ್ಡ ಕುಸಿತ ಪ್ರಕರಣ ನಮ್ಮ ಮುಂದಿದೆ, ಅಂಥ ಮತ್ತೊಂದು ಘಟನೆ ನಡೆಯಬಾರದು.
ಮಂಗಳೂರು: ನಗರದ ಹೊರವಲಯದಲ್ಲಿರುವ ಕೆತ್ತಿಕಲ್ ಬಳಿ ಗುಡ್ಡ ಕುಸಿಯುವ ಭೀತಿಯ ಬಗ್ಗೆ ನಮ್ಮ ವರದಿಗಾರ ಕೆಲ ದಿನಗಳ ಹಿಂದೆ ಒಂದು ವಿಡಿಯೋ ವರದಿಯನ್ನು ಕಳಿಸಿದ್ದರು. ಅವರು ಅನುಮಾನಿಸಿದ್ದು ನಿಜವಾಗುತ್ತಿದೆ. ಗುಡ್ಡದಿಂದ ಮಣ್ಣು ಕೆಳಗೆ ಬೀಳುತ್ತಿರುವ ಅಪಾಯಕಾರಿವೆನಿಸುವ ದೃಶ್ಯಗಳನ್ನು ಇಲ್ಲಿ ನೋಡಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಂಗಳೂರು-ಸೋಲಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರುನಿಂದ ಕಾರ್ಕಳದ ಸಾಣೂರುವರೆಗೆ ನಾಲ್ಕು ಲೇನ್ ಗಳಲ್ಲಿ ಪರಿವರ್ತಿಸುವ ಕಾಮಗಾರಿ ನಡೆಸುತ್ತಿದೆ. ಆದರೆ, ಕಾಮಗಾರಿಗಾಗಿ ಗುಡ್ಡವನ್ನು ಅವೈಜ್ಞಾನಿಕವಾಗಿ ಅಗೆದಿರುವ ಕಾರಣ ಗುಡ್ಡ ಕುಸಿಯುವ ಅಪಾಯ ಎದುರಾಗಿದೆ. ಗುಡ್ಡವನ್ನು ಅಗೆಯುವ ಮೊದಲು ಪ್ರಾಧಿಕಾರದ ಅಧಿಕಾರಿಗಳು ಕೆಳಗಿನ ಭಾಗದಲ್ಲಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದ್ದಾರೆ! ಇದು ಗುಡ್ಡ ಸ್ವಾಮಿ, 30 X 40 ಸೈಟ್ನಲ್ಲಿ ಕಟ್ಟಿರುವ ಮನೆಯಲ್ಲ!! ಗುಡ್ಡ ಮೇಲಿಂದ ಕುಸಿಯುತ್ತದೆ ಕೆಳಗಿಂದಲ್ಲ. ಪ್ರಾಧಿಕಾರವು ಜನರ ಜೀವಗಳೊಂದಿಗೆ ಚೆಲ್ಲಾಟವಾಡುವ ಬದಲು, ಪರಿಣಿತರ ಸಲಹೆ ತೆಗೆದುಕೊಳ್ಳುವುದು ಒಳಿತು. ಜಿಲ್ಲಾಡಳಿತವು ಪ್ರಾಧಿಕಾರಕ್ಕೆ ಈಗಾಗಲೇ ಸೂಚನೆ ನೀಡಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶೃಂಗೇರಿ ಮಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆಯುದ್ದಕ್ಕೂ ಮಣ್ಣು, ಬೃಹತ್ ಬಿರುಕು