ಶೃಂಗೇರಿ ಮಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆಯುದ್ದಕ್ಕೂ ಮಣ್ಣು, ಬೃಹತ್​ ಬಿರುಕು

ಕರ್ನಾಟಕದಾದ್ಯಂತ ವರುಣಾರ್ಭಟ ಜೋರಾಗಿದ್ದು ಕರಾವಳಿ ಪ್ರದೇಶ, ಮಲೆನಾಡು ಹಾಗೂ ಬಯಲು ಸೀಮೆಯಲ್ಲಿಯೂ ಭಾರಿ ಮಳೆ ಆಗುತ್ತಿದೆ. ಭಾರಿ ಮಳೆ ಕಾರಣ ಮಂಗಳೂರಿನಿಂದ ಪ್ರಸಿದ್ಧ ಯಾತ್ರಾ ಸ್ಥಳ ಶೃಂಗೇರಿಯನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಭೂಕಸಿತ ಸಂಭವಿಸಿದೆ. ಮಳೆಯಿಂದಾಗಿ ರಾಜ್ಯದ ಎಲ್ಲೆಲ್ಲಿ ಏನು ಹಾನಿ ಸಂಭವಿಸಿದೆ ಎಂಬ ವಿವರ ಇಲ್ಲಿದೆ.

ಶೃಂಗೇರಿ ಮಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆಯುದ್ದಕ್ಕೂ ಮಣ್ಣು, ಬೃಹತ್​ ಬಿರುಕು
ಮಂಗಳೂರು ಬಳಿ ಹೆದ್ದಾರಿ ಬದಿ ಭೂಕುಸಿತ
Follow us
|

Updated on: Jul 20, 2024 | 1:16 PM

ಶೃಂಗೇರಿ, ಜುಲೈ 20: ಚಿಕ್ಕಮಗಳೂರಿನ ಪ್ರಸಿದ್ಧ ಯಾತ್ರಾ ಸ್ಥಳ ಶೃಂಗೇರಿಗೆ ಮಂಗಳೂರಿನಿಂದ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಮ್ಮಾರು ಗ್ರಾಮ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದು, ರಸ್ತೆಯುದ್ದಕ್ಕೂ ಮಣ್ಣು ತುಂಬಿದೆ. ಜತೆಗೆ ಬೃಹತ್​ ಬಿರುಕೊಂದು ಬಿಟ್ಟಿದೆ. ಇದೇ ರಸ್ತೆಯಲ್ಲೇ ವಾಹನಗಳು ಬಿಡುವಿಲ್ಲದೇ ಸಂಚಾರ ಮಾಡುತ್ತಿವೆ. ಗುಡ್ಡ ಕುಸಿತದಿಂದಾಗಿ ದೊಡ್ಡ ದೊಡ್ಡ ಮರಗಳು, ಕಲ್ಲು, ಬಂಡೆಗಳು ರಸ್ತೆಗೆ ಬಿದ್ದಿವೆ.

ಭದ್ರಾ ನದಿ ಆರ್ಭಟಕ್ಕೆ ಹೆಬ್ಬಾಳೆ ಸೇತುವೆ ಶಿಥಿಲ!

ಕಳಸ ತಾಲೂಕಿನಲ್ಲಿ ವರುಣಾರ್ಭಟ ಕೊಂಚ ಕಡಿಮೆಯಾಗಿದೆ. ಕಳಸ‌, ಕುದುರೆಮುಖ, ಕೆರೆಕಟ್ಟೆ ಭಾಗದಲ್ಲಿ ಮಳೆ ಆರ್ಭಟ ತಗ್ಗಿದೆ. ಹೆಬ್ಬಾಳೆ ಸೇತುವೆ ಮೇಲೆ ಭದ್ರಾ ನದಿ ನೀರು ಹರಿವು ತಗ್ಗಿದೆ. ಕಳೆದ ಎರಡು ದಿನದಿಂದ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ಪರಿಣಾಮವಾಗಿ ಹೆಬ್ಬಾಳೆ ‌ಸೇತುವೆ ‌ಶಿಥಿಲಗೊಂಡಿದೆ. ಭದ್ರಾ ನದಿಯ ಆರ್ಭಟಕ್ಕೆ ಡಾಂಬರ್ ಕಿತ್ತು ಬಂದಿದ್ದು, ತಡೆಗೋಡೆ ಮುರಿದು ಹೋಗಿದೆ.

ಹಾಸನದಲ್ಲಿ ಮುಂದುವರಿದ ಮಳೆ ಆರ್ಭಟ

ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಧಾರಾಕಾರ ಮಳೆಗೆ ಗೊರೂರು ಗ್ರಾಮದಲ್ಲಿ ಮನೆ ಗೋಡೆ ಕುಸಿತವಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೇಟೆ ಬೀದಿಯಲ್ಲಿರುವ ನೂರುಲ್ಲಾಖಾನ್‌ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಶುಕ್ರವಾರ ರಾತ್ರಿ ಹೇಮಾವತಿ ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಸ್ಥಳಕ್ಕೆ ಅಧಿಕಾರಗಳು ಭೇಟಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Landslide in Sringeri Mangalore Highway, Karnatak rains latest updates here in Kannada

ಹೇಮಾವತಿ ಜಲಾಶಯ

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಸಂಕೇನಹಳ್ಳಿಯಲ್ಲಿ ಮನೆ ಕುಸಿದು ಬಿದ್ದು ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳು ಸಾವಿಗೀಡಾಗಿವೆ. ಭಾರಿ ಮಳೆಗೆ ದ್ಯಾವಮ್ಮ ಎಂಬುವವರಿಗೆ ಸೇರಿದ ಮನೆ ಕುಸಿತವಾಗಿದೆ. ಅದೃಷ್ಟವಶಾತ್​ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿತ್ರದುರ್ಗ: ಮನೆ ಕುಸಿದು ಗಾಯಗೊಂಡಿದ್ದ ವ್ಯಕ್ತಿ ಸಾವು

ಮಳೆಗೆ ಮನೆ ಕುಸಿದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹೊಳಲ್ಕೆರೆ ತಾಲೂಕಿನ ಬಿದರಕೆರೆ ಲಂಬಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ ಜಯನಾಯ್ಕ್ (49) ಮೃತಪಟ್ಟಿದ್ದಾರೆ.

ತುಂಗಾ ನದಿ ಆರ್ಭಟಕ್ಕೆ ಶಿಥಿಲಗೊಂಡ ತೂಗು ಸೇತುವೆ

ತುಂಗಾ ನದಿ ಆರ್ಭಟಕ್ಕೆ ಶಿಥಿಲಗೊಂಡ ತೂಗು ಸೇತುವೆ ಮೇಲೆ ಗ್ರಾಮಸ್ಥರು ಜೀವದ ಆಸೆ ಬಿಟ್ಟು ಹೆಜ್ಜೆಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಘಟ್ಟಗಳ ಸಾಲಿನಲ್ಲಿ ಸುರಿದ ಮಳೆಗೆ ತುಂಗಾ ನದಿ ಅಪಾಯದ ಮಟ್ಟ ಮೀರಿ‌ ಹರಿಯುತ್ತಿದೆ. ಸದ್ಯ ತೂಗು ಸೇತುವೆ ಸಂಪೂರ್ಣ ಕುಸಿದು ಬಿಳುವ ಸ್ಥಿತಿಯಲ್ಲಿದ್ದು, ಇದರ ಮೇಲೆಯೇ ಮಕ್ಕಳು, ವಿಧ್ಯಾರ್ಥಿಗಳು, ಗ್ರಾಮಸ್ಥರು ಸಂಚಾರ ಮಾಡುತ್ತಿದ್ದಾರೆ.

ಶೃಂಗೇರಿ ಶಾರದಾ ಮಠದಲ್ಲಿ ಪ್ರವಾಸಿಗರ ಪರದಾಟ

ಶೃಂಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಶೃಂಗೇರಿ ಶಾರದಾ ಮಠದಲ್ಲಿ ಪ್ರವಾಸಿಗರು, ಭಕ್ತರು ಪರದಾಡುವಂತಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಶಾರದಾಂಬೆ ದರ್ಶನಕ್ಕೆ ಆಗಮಿಸಿರುವ ಭಕ್ತರು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿದ್ದಾರೆ.

ಕೊಡಗು ಜಿಲ್ಲೆಯಲ್ಕಿ ಸ್ವಲ್ಪ ತಗ್ಗಿದ ಮಳೆ

ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತುಸು ತಗ್ಗಿದ್ದು, ಮಳೆ ತಗ್ಗಿದರೂ ಪ್ರವಾಹ ಕಡಿಮೆಯಾಗಿಲ್ಲ. ಕುಶಾಲನಗರ ಸಾಯಿ ಬಡಾವಣೆ, ಬೆಟ್ಟದ ಕಾಡು, ಕರಡಿಗೋಡಿನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮಡಿಕೇರಿ ತಾಲೂಕಿನ ಚೆರಿಯಪರಂಬು, ಹೊದವಾಡ, ಬೊಳಿಬಾಣೆ ಪ್ರದೇಶಗಳಲ್ಲಿ ಕಾವೇರಿ ನದಿಯ ಪ್ರವಾಹ ಬಂದಿದೆ. ಪರಿಣಾಮವಾಗಿ ಗ್ರಾಮೀಣ ರಸ್ತೆಗಳು ಜಲಾವೃತವಾಗಿದೆ. ಪಾಲೂರು ಗ್ರಾಮದ ಹರಿಶ್ಚಂದ್ರ ದೇವಾಲಯಕ್ಕೆ ಜಲದಿಗ್ಬಂಧನ ಉಂಟಾಗಿದೆ. ಜಿಲ್ಲೆಯಲ್ಲಿ ಇಂದೂ ಕೂಡ ರೆಡ್ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿಯೂ ಭೂಕುಸಿತದ ಆತಂಕ: ಕಟ್ಟೆಚ್ಚರ ಘೋಷಿಸಿದ ಜಿಲ್ಲಾಡಳಿತ

ಶಿರಾಡಿ ಘಾಟ್​ನಲ್ಲಿ ಆತಂಕದಲ್ಲೇ ವಾಹನಗಳ ಸಂಚಾರ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿರುವ ಶಿರಾಡಿ ಘಾಟ್​ ರಸ್ತೆಯಲ್ಲಿ ಆತಂಕದಲ್ಲೇ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿವೆ. ಹೆದ್ದಾರಿ 75 ರಲ್ಲಿ ಸಂಜೆ 6ರವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ದೊಡ್ಡತಪ್ಲು ಬಳಿ ಕ್ಷಣ ಕ್ಷಣಕ್ಕೂ ಗುಡ್ಡದ ಮಣ್ಣು ಕುಸಿಯುತ್ತಿದ್ದು, ತೆರವು ಕಾರ್ಯ ನಡೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ