ರಾಗೀ ರಾಗೀ ಅಂತ ಕೂಗಲು ಇದೇನು ಸದನವಾ ಇಲ್ಲ ರಾಗಿ ಮಾರ್ಕೆಟ್ಟಾ? ಅಂತ ಶಾಸಕರನ್ನು ತರಾಟೆಗೆ ತೆಗೆದುಕೊಂಡರು ಸ್ಪೀಕರ್ ಕಾಗೇರಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 17, 2022 | 8:24 PM

ನಿಮಗೆ ಸರ್ಕಾರದಿಂದ ಉತ್ತರ ಬೇಕಾದರೆ ಮೊದಲು ನನ್ನ ಬಳಿ ಮಾತಾಡಬೇಕು. ಹೀಗೆ ರಾಗಿ ರಾಗಿ ಅಂತ ಕೂಗೋದಿಕ್ಕೆ ಇದೇನು ಸಂತೇನಾ ಅಥವಾ ರಾಗಿ ಮಾರ್ಕೆಟ್ಟಾ? ಎಂದು ಸ್ಪೀಕರ್ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ (Vishweshwar Hegde Kageri) ಅವರು ತಾಳ್ಮೆ ಕಳೆದುಕೊಂಡ ಪ್ರಸಂಗ ಗುರುವಾರ ಸದನದಲ್ಲಿ ನಡೆಯಿತು. ಕಾಗೇರಿ ಅವರು ಶೂನ್ಯವೇಳೆಯಲ್ಲಿ (Zero Hour) ಒಬ್ಬ ಸದಸ್ಯರಿಗೆ ಮಾತಾಡುವ ಅವಕಾಶ ನೀಡುವಾಗ ಶಾಸಕರೊಬ್ಬರು ರಾಗೀ ರಾಗೀ ಅಂತ ಜೋರಾಗಿ ಕೂಗಿದಾಗ ಅವರ ಸಹನೆ ಮೀರುತ್ತದೆ. ಸದನದಲ್ಲಿ (House) ಹೀಗೆಲ್ಲ ಅಸಭ್ಯವಾಗಿ ಕೂಗಾಡುವುದು ತರವಲ್ಲ, ಇಂತ ವರ್ತನೆಯನ್ನು ಸಹಿಸಿಕೊಳ್ಳಲಾಗದು ಅಂತ ತರಾಟೆಗೆ ತೆಗೆದುಕೊಳ್ಳುತ್ತಾರೆ. ಶೂನ್ಯವೇಳೆಯಲ್ಲಿ ಯಾರಾದರೂ ಮಾತಾಡಬೇಕಾದರೆ, ಮೊದಲು ತನ್ನಲ್ಲಿಗೆ ಬಂದು ಮಾತಾಡಬೇಕು. ರಾಗಿ ಒಂದು ಪ್ರಮುಖ ವಿಷಯ ಮತ್ತು ಅದರ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಅಂತ ಗೊತ್ತಿದೆ ಅಂತ ಸ್ಪೀಕರ್ ಹೇಳುವಾಗ ಶಾಸಕರು ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ.

ಆಗ ಪುನಃ ರೇಗುವ ಸ್ಪೀಕರ್ ಕಾಗೇರಿ ಅವರು, ಹೇಳುವುದನ್ನಾದರೂ ಸಮಾಧಾ ನದಿಂದ ಕೇಳಿ, ನಾನು ಮಾತಾಡುವಾಗ ಮಧ್ಯೆ ಮಾತಾಡಿದರೆ, ಅದು ಅಸಭ್ಯ ಮತ್ತು ಅಸಹ್ಯ ಅನಿಸುತ್ತದೆ. ನೀವು ಡಾಕ್ಟರ್ ಆಗಿರುವವರು, ಹೇಳುವುದಕ್ಕೆ-ಕೇಳುವುದಕ್ಕೆ ಒಂದು ವಿಧಾನ ಇರುತ್ತದೆ. ಯಾವುದೇ ಒಂದು ವಿಷಯ ಒಮ್ಮೆ ಪ್ರಸ್ತಾಪವಾದ ಮೇಲೆ ಅದನ್ನು ರಿಪೀಟ್ ಮಾಡಬಾರದು ಅಂತ ನಿಯಮ ಹೇಳುತ್ತದೆ. ಆದರೆ ರಾಗಿ ಬೆಳೆಗಾರರು ಕಷ್ಟದಲ್ಲಿದ್ದಾರೆ ಎರಡು ಸಲ ಚರ್ಚೆಗೆ ಅವಕಾಶ ಮಾಡಿಕೊಟ್ಟೆ. 3 ಲಕ್ಷ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಅಂತ ಸರ್ಕಾರ ಹೇಳಿದೆ ಎಂದು ಸ್ಪೀಕರ್ ಹೇಳಿದರು.

ನಿಮಗೆ ಸರ್ಕಾರದಿಂದ ಉತ್ತರ ಬೇಕಾದರೆ ಮೊದಲು ನನ್ನ ಬಳಿ ಮಾತಾಡಬೇಕು. ಹೀಗೆ ರಾಗಿ ರಾಗಿ ಅಂತ ಕೂಗೋದಿಕ್ಕೆ ಇದೇನು ಸಂತೇನಾ ಅಥವಾ ರಾಗಿ ಮಾರ್ಕೆಟ್ಟಾ? ಎಂದು ಸ್ಪೀಕರ್ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ನಾನು ಪ್ರಶ್ನೆಯನ್ನು ತಗೊಳ್ತೇನೆ, ವಿಷಯದ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಮೊದಲು ನನ್ನಲ್ಲಿಗೆ ಬಂದು ಸಮಾಧಾನದಿಂದ ಮಾತಾಡಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳುತ್ತಾರೆ.

ಇದನ್ನೂ ಓದಿ:  ಕಲಾಪ ಆರಂಭಗೊಂಡರು ಬಾರದ ಸಭಾ ನಾಯಕರು; ಸಚಿವರೆಲ್ಲ ರಾಜೀನಾಮೆ ಕೊಟ್ಟರಾ ಎಂದ ಹರಿಪ್ರಸಾದ್