ಗುರುವಾರ ಅಂದರೆ ರಾಯರ ವಾರ. ಗುರುವಾರ ಬಂದರೆ ಸಾಕು ದೇಶಾದ್ಯಂತ ಇರುವಂತಾ ರಾಯರ ಮಠ ಮಂದಿರಗಳಲ್ಲಿ ಗುರುರಾಯರ ಆರಾಧನೆ ಪ್ರತಿ ನಿತ್ಯ ನಡೆಯುವ ಪೂಜೆಗಿಂತಲೂ ಭಿನ್ನವಾಗಿರುತ್ತದೆ. ಸಕಲ ವರಗಳನ್ನ ನೀಡುವ ರಾಯರ ಆಲಯಕ್ಕೆ ಗುರುವಾರದಂದು ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚು. ಗುರುರಾಯರ ಮಂತ್ರಾಲಯ ದರ್ಶನ ಮಾಡಬೇಕು ಅನ್ನೋದು ಗುರು ರಾಘವೇಂದ್ರ ಭಕ್ತರ ಹೆಬ್ಬಯಕೆ. ಆ ಹೆಬ್ಬಯಕೆಯನ್ನ ಈಡೇರಿಸುವ ಹಾಗಿದೆ ಮಿನಿ ಮಂತ್ರಾಲಯ ಅಂತಲೇ ಹೆಸರುವಾಸಿಯಾಗಿದೆ ಶಾಖಾ ಮಠ. ಉತ್ತರ ಕರ್ನಾಟಕದಲ್ಲಿ ಬಾಗಲಕೋಟೆಯಲ್ಲಿರುವ ಗುರು ರಾಘವೇಂದ್ರರ ಶಾಖಾಮಠ ಇದು. ಮಿನಿಮಂತ್ರಾಲಯ ಎಂದೇ ಈ ಶಾಖಾ ಮಠ ಹೆಸರಾಗಿದೆ. ಮೂವತ್ತೆಂಟು ವರ್ಷಗಳ ಹಿಂದೆ ನಿರ್ಮಾಣವಾದ ರಾಯರ ಮಠ ಭಕ್ತರ ಪಾಲಿನ ಆಶಾಕಿರಣವಾಗಿದೆ.