ಬೆಂಗಳೂರಿನಲ್ಲಿ 7.11 ಕೋಟಿ ರೂ.ದರೋಡೆ: ಆರೋಪಿಗಳು ಸಿಕ್ಕೇ ಇಲ್ಲ ಎಂದ ಪೊಲೀಸ್ ಆಯುಕ್ತ
ನವೆಂಬರ್ 19ರಂದು ಬೆಂಗಳೂರಿನ ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಎಟಿಎಂ ವಾಹನದಿಂದ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪೊಲೀಸರು ಈಗಾಗಲೇ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈಗಾಗಲೇ ಕೆಲ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಇದುವರೆಗೂ ದರೋಡೆಕೋರರು ಸಿಕ್ಕಿಲ್ಲ ಎಂದು ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ನವೆಂಬರ್ 21): ಮೊನ್ನೆ ಬೆಂಗಳೂರಿನ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ನಡೆದಿದ್ದ ಏಳು ಕೋಟಿ ರೂ. ರಾಬರಿ ಬೆಂಗಳೂರು ಪೊಲೀಸ ತಲೆ ಕೆಡಿಸಿದೆ. ಹದಿನೆಂಟು ಜನ ಡಿಸಿಪಿಗಳ ನೇತೃತ್ವದ ತಂಡಗಳು ಎರಡು ದಿನ ಹಗಲು ರಾತ್ರಿ ನಿದ್ದೆ ಕೆಡಿಸಿಕೊಂಡು ದರೋಡೆಕೋರರ ಬಂಧನಕ್ಕೆ ಹುಡುಕಾಟ ನಡೆಸಿವೆ. ಆಂಧ್ರ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲೂ ಪೊಲೀಸರ ತಂಡ ಶೋಧ ಕಾರ್ಯ ನಡೆಸಿದೆ. ಆದರೂ ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಹೀಗಾಗಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ನೇತೃತ್ವದಲ್ಲಿ ಇಂದು(ನವೆಂಬರ್ 21) ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, ಸಭೆಯಲ್ಲಿ ಪ್ರಕರಣದ ತನಿಖೆಯಲ್ಲಿ ಈವರೆಗೆ ಆದ ಬೆಳವಣಿಗೆ ಬಗ್ಗೆ ಚರ್ಚೆ ಆಗಿದೆ.
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಕಚೇರಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ದಕ್ಷಿಣ ವಿಭಾಗ ಡಿಸಿಪಿ ಜಗಲಾಸರ್, ಸಿಸಿಬಿ ಡಿಸಿಪಿ-1 ಶ್ರೀಹರಿಬಾಬು ಭಾಗಿಯಾಗಿದ್ದು, ಪ್ರಕರಣ ತನಿಖೆ ಬಗ್ಗೆ ಸುದೀರ್ಘ ಚರ್ಚೆಯಾಗಿದೆ.
ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರಿನಲ್ಲಿ 7 ಕೋಟಿ 11 ಲಕ್ಷ ದರೋಡೆ ಪ್ರಕರಣದ ತನಿಖೆಯ ಪ್ರಗತಿ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ದರೋಡೆ ಪ್ರಕರಣ ಸಂಬಂಧ ಈವರೆಗೆ ಸಾಕಷ್ಟು ಲೀಡ್ ಸಿಕ್ಕಿದೆ. ಆದರೆ ಆರೋಪಿಗಳು ಪತ್ತೆ ಆಗುತ್ತಿಲ್ಲ. ಎಲ್ಲೆಡೆ ಪೊಲೀಸರು ಅಲರ್ಟ್ ಆಗಿದ್ದಾರೆ. ಪ್ರಕರಣ ಬೇಗ ಇತ್ಯರ್ಥ ಆಗುತ್ತೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

