ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!

Updated on: May 30, 2025 | 11:34 AM

IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್​ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 101 ರನ್​ಗಳಿಸಿದರೆ, ಆರ್​ಸಿಬಿ 10 ಓವರ್​ಗಳಲ್ಲಿ ಈ ಗುರಿಯನ್ನು ಚೇಸ್ ಮಾಡಿದೆ.

ಮುಲ್ಲನ್​ಪುರ್​ನಲ್ಲಿ ನಡೆದ ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ಸುಯಶ್ ಶರ್ಮಾ ಕೂಡ ಒಬ್ಬರು. ಏಕೆಂದರೆ ಈ ಪಂದ್ಯದಲ್ಲಿ ಅತ್ಯುತ್ತಮ ಸ್ಪಿನ್ ದಾಳಿ ಸಂಘಟಿಸಿದ ಸುಯಶ್ 3 ಓವರ್​ಗಳಲ್ಲಿ 17 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

ಈ ಮೂರು ವಿಕೆಟ್​ಗಳು ಯಾವುದೆಂದರೆ… ಡೇಂಜರಸ್ ಮಾರ್ಕಸ್ ಸ್ಟೊಯಿನಿಸ್, ಹೊಡಿಬಡಿ ದಾಂಡಿಗ ಶಶಾಂಕ್ ಸಿಂಗ್ ಹಾಗೂ ಮುಶೀರ್ ಖಾನ್ ಅವರದ್ದು. ಹೀಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವ ಮೂಲಕ ಸುಯಶ್ ಪಂಜಾಬ್ ಕಿಂಗ್ಸ್ 101 ರನ್​ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

ವಿಶೇಷ ಎಂದರೆ ಈ ಬಾರಿಯ ಐಪಿಎಲ್​ಗೆ ಆಯ್ಕೆಯಾಗಿದ್ದ ಸುಯಶ್ ಶರ್ಮಾ ಟೂರ್ನಿಗೆ ಅಲಭ್ಯರಾಗುವ ಸ್ಥಿತಿಯಲ್ಲಿದ್ದರು. ಏಕೆಂದರೆ ಐಪಿಎಲ್ ಆರಂಭಕ್ಕೂ ಕೆಲ ತಿಂಗಳುಗಳ ಮುಂಚೆ ಸುಯಶ್ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಈ ಬಾರಿಯ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆ ಆರ್​ಸಿಬಿ ಫ್ರಾಂಚೈಸಿ ಸುಯಶ್ ಶರ್ಮಾ ಅವರ ನೆರವಿಗೆ ನಿಂತರು. ಅಲ್ಲದೆ ಉತ್ತಮ ಚಿಕಿತ್ಸೆಗಾಗಿ ಅವರನ್ನು ಲಂಡನ್​ಗೆ ಕಳುಹಿಸಿದರು. ಇದರ ಖರ್ಚು ವೆಚ್ಚಗಳನ್ನು ಆರ್​ಸಿಬಿ ಫ್ರಾಂಚೈಸಿಯೇ ನೋಡಿಕೊಂಡಿತು.

ಅಷ್ಟೇ ಅಲ್ಲದೆ ಆರ್​ಸಿಬಿ ಫಿಸಿಯೋ ಜೇಮ್ಸ್ ಪೈಪಿ ಲಂಡನ್​ನಲ್ಲಿ ಸುಯಶ್ ಶರ್ಮಾ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಿದರು. ಐಪಿಎಲ್ ಆರಂಭಕ್ಕೂ ಮುನ್ನ ಫಿಟ್ ಆಗುವಂತೆ ನೋಡಿಕೊಂಡರು. ಹೀಗೆ ಯುವ ಆಟಗಾರನಿಗೆ ಆರ್​ಸಿಬಿ ಫ್ರಾಂಚೈಸಿ ಎಲ್ಲಾ ರೀತಿಯ ನೆರವು ನೀಡಿತು.

ಇದೀಗ ಅದೇ ಆರ್​ಸಿಬಿ ಫ್ರಾಂಚೈಸಿಗೆ ಸುಯಶ್ ಶರ್ಮಾ ಕಪ್ ಗೆಲ್ಲಿಸಿಕೊಡಲು ಪಣತೊಟ್ಟಿದ್ದಾರೆ. ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಹೇಳಿಕೆಯನ್ನು ಸಮರ್ಥಿಸುವಂತೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸುಯಶ್ ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಇನ್ನು ಜೂನ್ 3 ರಂದು ಕೂಡ ಸುಯಶ್ ಕಡೆಯಿಂದ ಇಂತಹದ್ದೇ ಪ್ರದರ್ಶನ ಮೂಡಿಬಂದರೆ, ಆರ್​ಸಿಬಿ ಕಪ್ ಗೆಲ್ಲುವುದರಲ್ಲಿ ಡೌಟೇ ಇಲ್ಲ ಎನ್ನಬಹುದು.

 

 

 

 

 

 

 

Published on: May 30, 2025 11:33 AM