IND vs SA: ‘ನಿರ್ಧಾರ ಬಿಸಿಸಿಐಗೆ ಬಿಟ್ಟಿದ್ದು’; ಅವಮಾನಕರ ಸೋಲಿನ ನಂತರ ಗಂಭೀರ್ ಹೇಳಿದ್ದಿದು

Updated on: Nov 26, 2025 | 5:16 PM

Gautam Gambhir coach future: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವೈಟ್‌ವಾಶ್ ನಂತರ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಭವಿಷ್ಯ ಅನಿಶ್ಚಿತವಾಗಿದೆ. ಭಾರತದ ಐತಿಹಾಸಿಕ ಸೋಲಿನ ಬಳಿಕ, ಗಂಭೀರ್ ತಮ್ಮ ಹಿಂದಿನ ಯಶಸ್ಸುಗಳನ್ನು ಉಲ್ಲೇಖಿಸಿ, ತಂಡದಲ್ಲಿನ ಅನುಭವದ ಕೊರತೆಯನ್ನು ಪ್ರಸ್ತಾಪಿಸಿದ್ದಾರೆ. ಅವರ ಭವಿಷ್ಯದ ಬಗ್ಗೆ ಬಿಸಿಸಿಐ ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ, ಭಾರತೀಯ ಕ್ರಿಕೆಟ್ ವೈಯಕ್ತಿಕ ಭವಿಷ್ಯಕ್ಕಿಂತ ಮುಖ್ಯ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆದ ನಂತರ, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಬುಧವಾರ ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 408 ರನ್‌ಗಳ ಸೋಲು ಅನುಭವಿಸಿತು. ಇದು ರನ್‌ಗಳ ವಿಷಯದಲ್ಲಿ ಭಾರತದ ಅತಿದೊಡ್ಡ ಟೆಸ್ಟ್ ಸರಣಿ ಸೋಲು. ದಕ್ಷಿಣ ಆಫ್ರಿಕಾ 25 ವರ್ಷಗಳ ನಂತರ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದೆ. ಈ ಅವಮಾನಕರ ಪ್ರದರ್ಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ತನ್ನ ಭವಿಷ್ಯವನ್ನು ಬಿಸಿಸಿಐ ನಿರ್ಧರಿಸಬೇಕಾಗುತ್ತದೆ ಎಂದಿದ್ದಾರೆ. ಇದರ ಜೊತೆಗೆ ಗಂಭೀರ್ ತಮ್ಮ ಹಿಂದಿನ ಸಾಧನೆಗಳನ್ನು ಸಹ ಪಟ್ಟಿ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ‘ಬಿಸಿಸಿಐ ನನ್ನ ಭವಿಷ್ಯವನ್ನು ನಿರ್ಧರಿಸಬೇಕಾಗುತ್ತದೆ. ಭಾರತೀಯ ಕ್ರಿಕೆಟ್ ಮುಖ್ಯ, ನಾನು ಮುಖ್ಯವಲ್ಲ ಎಂದು ನಾನು ಮುಖ್ಯ ಕೋಚ್ ಆಗಿ ಅಧಿಕಾರವಹಿಸಿಕೊಂಡಾಗಲೇ ಹೇಳಿದ್ದೆ. ಮರೆಯಬೇಡಿ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಲು, ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾಕಪ್ ಗೆಲ್ಲಲು ತಂಡವನ್ನು ಮುನ್ನಡೆಸಿದ ಅದೇ ವ್ಯಕ್ತಿ ನಾನು. ಟೀಂ ಇಂಡಿಯಾ ಪರಿವರ್ತನೆಯ ಹಂತದ ಮೂಲಕ ಸಾಗುತ್ತಿದ್ದು, ಪ್ರಸ್ತುತ ತಂಡದಲ್ಲಿ ಅನುಭವದ ಕೊರತೆಯಿದೆ.

ಇದಲ್ಲದೆ, ನಾವು ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ ಒನ್ ತಂಡವಾಗಲು ಬಯಸಿದರೆ, ಈ ಸ್ವರೂಪಕ್ಕೆ ಆದ್ಯತೆ ನೀಡಬೇಕು. ನಾವು ಉತ್ತಮವಾಗಿ ಆಡಬೇಕಾಗಿದೆ. ಒಂದು ಹಂತದಲ್ಲಿ 95 ರನ್​ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ತಂಡ 122 ರನ್​ಗಳಿಗೆ 7 ವಿಕೆಟ್ ಕಳೆದುಕೊಳ್ಳುವುದು ಸ್ವೀಕಾರಾರ್ಹವಲ್ಲ. ಇಲ್ಲಿ ನೀವು ಯಾವುದೇ ಒಬ್ಬ ಆಟಗಾರ ಅಥವಾ ಯಾವುದೇ ಒಂದು ಶಾಟ್ ಅನ್ನು ದೂಷಿಸಲು ಸಾಧ್ಯವಿಲ್ಲ. ನಾನು ಯಾರನ್ನೂ ಎಂದಿಗೂ ದೂಷಿಸಿಲ್ಲ, ಮತ್ತು ನಾನು ಅದನ್ನು ಎಂದಿಗೂ ಮಾಡುವುದಿಲ್ಲ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 26, 2025 05:15 PM