ಆಂತರಿಕ ರಕ್ತಸ್ರಾವ… ಶ್ರೇಯಸ್ ಅಯ್ಯರ್ ಐಸಿಯುಗೆ ದಾಖಲು

Updated on: Oct 27, 2025 | 12:49 PM

Shreyas Iyer Injury Update: ಸಿಡ್ನಿಯಲ್ಲಿ ನಡೆದ ಮೂರನೇ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್​ ಕ್ಯಾರಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಹೋಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು. ಈ ಡೈವಿಂಗ್ ವೇಳೆ ಅವರ ಎಡ ಪಕ್ಕೆಲುಬುಗಳಿಗೆ ಗಂಭೀರ ಪೆಟ್ಟು ಬಿದ್ದಿತು.

ಭಾರತ-ಆಸ್ಟ್ರೇಲಿಯಾ ಸರಣಿಯ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವಾಗ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಈ ಗಾಯವು ಗಂಭೀರವಾಗಿರುವ ಕಾರಣ ಇದೀಗ ಅವರನ್ನು ಐಸಿಯುನಲ್ಲಿರಿಸಲಾಗಿದೆ ಎಂದು ವರದಿಯಾಗಿದೆ.

ಶ್ರೇಯಸ್ ಅಯ್ಯರ್ ಅವರ ಪೆಕ್ಕೆಲುಬಿಗೆ ಗಂಭೀರ ಗಾಯವಾಗಿದ್ದು, ಇದರಿಂದ ಹೊಟ್ಟೆಯ ಮೇಲ್ಭಾಗದ ಅಂಗದಲ್ಲಿ (ಗುಲ್ಮ)  ಆಂತರಿಕ ರಕ್ತಸ್ರಾವವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದೇ ಕಾರಣದಿಂದಾಗಿ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.

ಸದ್ಯ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೇಯಸ್ ಅಯ್ಯರ್ ಇನ್ನೂ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಲಿದ್ದಾರೆ.  ಅಲ್ಲದೆ ಮುಂದಿನ 48 ಗಂಟೆಗಳಲ್ಲಿ ರಕ್ತಸ್ರಾವ ಕಡಿಮೆಯಾಗದಿದ್ದರೆ ಅವರ ವಾಸ್ತವ್ಯವನ್ನು ವಿಸ್ತರಿಸಬಹುದು ಎಂದು ತಿಳಿದುಬಂದಿದೆ.

ಬಿಸಿಸಿಐ ಸ್ಪಷ್ಟನೆ:

ಶ್ರೇಯಸ್ ಅಯ್ಯರ್ ಅವರ ಸ್ಕ್ಯಾನ್‌ ರಿಪೋರ್ಟ್​ನಲ್ಲಿ ಗುಲ್ಮಕ್ಕೆ ಗಾಯವಾಗಿರುವುದು ಕಂಡುಬಂದಿದೆ. ಇದೀಗ ಸಿಡ್ನಿಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯವಾಗಿ ಸ್ಥಿರವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ.

ಬಿಸಿಸಿಐ ವೈದ್ಯಕೀಯ ತಂಡವು ಸಿಡ್ನಿ ಮತ್ತು ಭಾರತದ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚಿಸಿ ಅವರ ಗಾಯದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಶ್ರೇಯಸ್ ಅವರ ದೈನಂದಿನ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಭಾರತೀಯ ತಂಡದ ವೈದ್ಯರು ಸಿಡ್ನಿಯಲ್ಲಿಯೇ ಇರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಶ್ರೇಯಸ್ ಅಯ್ಯರ್​ಗೆ ಆಗಿದ್ದೇನು?

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಎಸೆತದಲ್ಲಿ ಅಲೆಕ್ಸ್​ ಕ್ಯಾರಿ ಭರ್ಜರಿ ಹೊಡೆತ ಬಾರಿಸಿದ್ದರು. ಈ ವೇಳೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಹೋಗಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು. ಈ ಡೈವಿಂಗ್ ವೇಳೆ ಅವರ ಎಡ ಪಕ್ಕೆಲುಬುಗಳಿಗೆ ಗಂಭೀರ ಪೆಟ್ಟು ಬಿದ್ದಿದೆ. ಈ ಹೊಡೆತದ ನೋವಿನಿಂದ ನರಳಿದ್ದ ಶ್ರೇಯಸ್ ಅಯ್ಯರ್ ಅವರನ್ನು ತಕ್ಷಣವೇ ವೈದ್ಯರಲ್ಲಿಗೆ ಕರೆದೊಯ್ಯಲಾಗಿತ್ತು. ಇದೀಗ ಸಿಡ್ನಿಯಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯವು ಗಂಭೀರವಾಗಿರುವ ಕಾರಣ ಅವರನ್ನು ತೀವ್ರ ನಿಗಾದಲ್ಲಿರಿಸಲಾಗಿದೆ ಎಂದು ವರದಿಯಾಗಿದೆ.

 

Published on: Oct 27, 2025 12:32 PM