ಸೆಮಿಫೈನಲ್ಗೂ ಮುನ್ನ ಟೀಮ್ ಇಂಡಿಯಾಗೆ ಆಘಾತ
Women's World Cup 2025: ವುಮೆನ್ಸ್ ವರ್ಲ್ಡ್ಕಪ್ ನಾಕೌಟ್ ಪಂದ್ಯಗಳು ಅಕ್ಟೋಬರ್ 29 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಎದುರಾಳಿ ಆಸ್ಟ್ರೇಲಿಯಾ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರ್ತಿ ಗಾಯಗೊಂಡಿರುವುದು ಇದೀಗ ಹರ್ಮನ್‌ಪ್ರೀತ್ ಕೌರ್ ಪಡೆಯ ಚಿಂತೆಯನ್ನು ಹೆಚ್ಚಿಸಿದೆ.

ಮಹಿಳಾ ಏಕದಿನ ವಿಶ್ವಕಪ್ನ ಸೆಮಿಫೈನಲ್ಗೂ ಮುನ್ನ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ್ತಿ ಪ್ರತಿಕಾ ರಾವಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪ್ರತಿಕಾ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದು, ಹೀಗಾಗಿ ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದಾದ ಬಳಿಕ ನಡೆದ ಬ್ಯಾಟಿಂಗ್ ವೇಳೆ ಅವರು ಕಣಕ್ಕಿಳಿದಿರಲಿಲ್ಲ.
ಪ್ರತಿಕಾ ರಾವಲ್ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ. ಈ ಬಾರಿಯ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವಲ್ಲಿ ಪ್ರತಿಕಾ ಪ್ರಮುಖ ಪಾತ್ರವಹಿಸಿದ್ದರು. 6 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದ ಯುವ ಬ್ಯಾಟರ್ ಒಟ್ಟು 308 ರನ್ ಕಲೆಹಾಕಿದ್ದರು. ಇದೀಗ ನಿರ್ಣಾಯಕ ಪಂದ್ಯಕ್ಕೂ ಮುನ್ನ ಪ್ರತಿಕಾ ರಾವಲ್ ಗಾಯಗೊಂಡಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.
ಸೆಮಿಫೈನಲ್ ಪಂದ್ಯ ಯಾವಾಗ?
ಮಹಿಳಾ ಏಕದಿನ ವಿಶ್ವಕಪ್ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಅಕ್ಟೋಬರ್ 30 ರಂದು ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಪ್ರತಿಕಾ ರಾವಲ್ ಕಣಕ್ಕಿಳಿಯಲಿದ್ದಾರೆ.
ಈ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್, ಪ್ರತಿಕಾ ರಾವಲ್ ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಅವರಿಂದ ಶುಭ ಸುದ್ದಿಯನ್ನು ನಿರೀಕ್ಷಿಸುತ್ತೇವೆ ಎಂದಿದ್ದಾರೆ.
ಪ್ರತಿಕಾ ರಾವಲ್ ವಿಡಿಯೋ:
A freak injury for Indian opener #PratikaRawal while diving to save a boundary! 😧
Catch the LIVE action ➡ https://t.co/AHK0zZJTc3#CWC25 👉 #INDvBAN | LIVE NOW pic.twitter.com/xvWH7lFTrV
— Star Sports (@StarSportsIndia) October 26, 2025
ಪ್ರತಿಕಾ ರಾವಲ್ ಹೊರಗುಳಿದರೆ ಯಾರಿಗೆ ಚಾನ್ಸ್?
ಪ್ರತಿಕಾ ರಾವಲ್ ಸೆಮಿ ಫೈನಲ್ ಪಂದ್ಯಕ್ಕೆ ಅಲಭ್ಯರಾದರೆ ಅವರ ಬದಲಿಗೆ ಅಮನ್ಜೋತ್ ಕೌರ್ ಆರಂಭಿಕಳಾಗಿ ಕಣಕ್ಕಿಳಿಯಬಹುದು. ಏಕೆಂದರೆ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಿಂದ ಪ್ರತಿಕಾ ಹೊರಗುಳಿದಿದ್ದ ಕಾರಣ ಸ್ಮೃತಿ ಮಂಧಾನ ಜೊತೆ ಅಮನ್ಜೋತ್ ಕೌರ್ ಇನಿಂಗ್ಸ್ ಆರಂಭಿಸಿದ್ದರು.
ಹೀಗಾಗಿ ನಿರ್ಣಾಯಕ ಪಂದ್ಯದಿಂದ ಪ್ರತಿಕಾ ರಾವಲ್ ಹೊರಗುಳಿದರೆ, ಆಲ್ರೌಂಡರ್ ಆಟಗಾರ್ತಿ ಅಮನ್ಜೋತ್ ಕೌರ್ಗೆ ಚಾನ್ಸ್ ಲಭಿಸುವ ಸಾಧ್ಯತೆ ಹೆಚ್ಚಿದೆ.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್ ಕೀಪರ್), ಕ್ರಾಂತಿ ಗೌಡ್, ಅಮನ್ಜೋತ್ ಕೌರ್, ರಾಧಾ ಯಾದವ್, ಶ್ರೀ ಚಾರಣಿ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ನೇಹ್ ರಾಣಾ.
ಇದನ್ನೂ ಓದಿ: ರೋಹಿತ್ ಶರ್ಮಾ ನಿವೃತ್ತಿಗೆ ಡೇಟ್ ಫಿಕ್ಸ್..!
ಮಹಿಳಾ ಏಕದಿನ ವಿಶ್ವಕಪ್ ನಾಕೌಟ್ ಪಂದ್ಯಗಳ ವೇಳಾಪಟ್ಟಿ:
- ಅಕ್ಟೋಬರ್ 29- ಮೊದಲ ಸೆಮಿಫೈನಲ್: ಇಂಗ್ಲೆಂಡ್ vs ಸೌತ್ ಆಫ್ರಿಕಾ (ಬರ್ಸಾಪಾರ ಸ್ಟೇಡಿಯಂ, ಗುವಾಹಟಿ)
- ಅಕ್ಟೋಬರ್ 30- ಎರಡನೇ ಸೆಮಿಫೈನಲ್ ಪಂದ್ಯ: ಭಾರತ vs ಆಸ್ಟ್ರೇಲಿಯಾ (ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ)
- ನವೆಂಬರ್ 2- ಫೈನಲ್ ಪಂದ್ಯ (ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ)
