Telangana Assembly Polls 2023: ಮೆಗಾಸ್ಟಾರ್ ಚಿರಂಜೀವಿ ಮತ್ತು ಕುಟುಂಬದ ಸದಸ್ಯರಿಂದ ಹೈದರಾಬಾದ್ ಜ್ಯುಬಿಲೀ ಹಿಲ್ಸ್ ನಲ್ಲಿ ಮತದಾನ
Telangana Assembly Polls 2023:ಚಿರಂಜೀವಿ ಈಗಲೂ ಜನಪ್ರಿಯ ನಟ ಅನ್ನೋದು ಸುಳ್ಳಲ್ಲ. ಅವರು ಲೀಡ್ ರೋಲಲ್ಲಿರುವ ಎರಡು ತೆಲುಗು ಚಲಮಚಿತ್ರಗಳು 2023 ರಲ್ಲಿ ಬಿಡುಗಡೆಯಾಗಿವೆ-ವಾಲ್ಟೇರ್ ವೀರಯ್ಯ ಮತ್ತು ಭೋಲಾ ಶಂಕರ್. ಅವರ ಮಗ ರಾಮಚರಣ್ ಮತ್ತು ಅಳಿಯ ಅಲ್ಲು ಅರ್ಜುನ್ ಟಾಲಿವುಡ್ ನಲ್ಲಿ ಸೂಪರ್ ಸ್ಟಾರ್ ಗಳು. ದೊಡ್ಡ ಉದಾರಿ ಎನಿಸಿಕೊಂಡಿರುವ ಚಿರಂಜೀವಿ ಹಲವಾರು ಲೋಕೋಪಯೋಗಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕೆಲ ಸಂಘ ಸಂಸ್ಥೆಗಳಿಗೆ ಧನಸಹಾಯ ಮಾಡುತ್ತಾರೆ.
ಹೈದರಾಬಾದ್: ವಿಧಾನಸಭಾ ಚುನಾವಣೆ ಭಾಗವಾಗಿ ತೆಲಂಗಾಣ ರಾಜ್ಯದೆಲ್ಲೆಡೆ (Telangana state) ಮತದಾನ ನಡೆಯುತ್ತಿದ್ದು ಮತ ಚಲಾಯಿಸಲು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ತಮ್ಮ ಕುಟುಂಬದೊಂದಿಗೆ ನಗರದ ಜ್ಯುಬಿಲೀ ಹಿಲ್ಸ್ ನಲ್ಲಿನ ಮತಗಟ್ಟೆಯೊಂದಕ್ಕೆ ಆಗಮಿಸಿದರು. ಕಪ್ಪು ವರ್ಣದ ಐಷಾರಾಮಿ ಕಾರೊಂದರಿಂದ ಚಿರಂಜೀವಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಇಳಿದು ಸರತಿ ಸಾಲಿನಲ್ಲಿ ಕೈಕಟ್ಟಿ ನಿಲ್ಲುವುದನ್ನು ನೋಡಬಹುದು. 80ರ ದಶಕದ ಉತ್ತರಾರ್ಧ ಮತ್ತು 90 ರ ದಶಕವಿಡೀ ತೆಲುಗು ಚಿತ್ರರಂಗವನ್ನಾಳಿದ 68-ವರ್ಷ ವಯಸ್ಸಿನ ಚಿರಂಜೀವಿ ದೈವಭಕ್ತರು. ಕಪ್ಪು ಬಟ್ಟೆ ಧರಿಸಿ ಬರಿಗಾಲಲ್ಲಿ ಬಂದು ಅವರು ವಿನೀತರಾಗಿ ಎರಡೂ ಕೈಕಟ್ಟಿಕೊಂಡು ಸಾಲಲ್ಲಿ ನಿಂತಿರುವುದನ್ನು ಕಾಣಬಹುದು. ರಾಜ್ಯ ವಿಧಾನ ಸಭೆಯ 119 ಸ್ಥಾನಗಳಿಗೆ 35, 655 ಪೋಲಿಂಗ್ ಸ್ಟೇಶನ್ ಗಳಲ್ಲಿ ಇವತ್ತು ಮತದಾನ ನಡೆಯುತ್ತಿದೆ. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಅಂಗವಿಕಲರಿಗೆ, 80 ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಮನೆಯಲ್ಲಿದ್ದುಕೊಂಡೇ ವೋಟು ಚಲಾಯಿಸುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ