6 ವರ್ಷದ ಬಾಲಕಿ ಜತೆ ಅಸಭ್ಯ ವರ್ತನೆ ಆರೋಪದ ಬಳಿಕ ಕೋಲಾರದಲ್ಲಿ ಉದ್ವಿಗ್ನ ಪರಿಸ್ಥಿತಿ: ರಸ್ತೆ ತಡೆ, ಪ್ರತಿಭಟನೆ
ಕೋಲಾರದಲ್ಲಿ 6 ವರ್ಷದ ಬಾಲಕಿ ಜೊತೆ ಅಸಭ್ಯ ವರ್ತನೆ ಆರೋಪ ಕೇಳಿಬಂದಿದ್ದು, ಆ ನಂತರ ಒಂದಷ್ಟು ಜನರು ಆಸ್ಪತ್ರೆ ಮತ್ತು ಠಾಣೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದ ಜನರನ್ನು ಮನವೊಲಿಸಲು ಪೊಲೀಸರು ಮತ್ತು ಶಾಸಕ ನಾರಾಯಣಸ್ವಾಮಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸದ್ಯ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಲಾರ, ಸೆಪ್ಟೆಂಬರ್ 3: ಕೋಲಾರದಲ್ಲಿ 6 ವರ್ಷದ ಬಾಲಕಿ ಜೊತೆ ವ್ಯಕ್ತಿಯೊಬ್ಬ ಅಸಭ್ಯ ವರ್ತನೆ ತೋರಿದ ಆರೋಪ ಕೇಳಿಬಂದಿದೆ. ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಘಟನೆ ಖಂಡಿಸಿ ನೂರಾರು ಜನರು ಆಸ್ಪತ್ರೆ ಮತ್ತು ಪೊಲೀಸ್ ಠಾಣೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕೃತ್ಯದಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಬುಧವಾರ ರಾತ್ರಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ನಿರಂತರ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಭೇಟಿ ನೀಡಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಸಹ ಸ್ಥಳದಲ್ಲಿ ಬೀಡುಬಿಟ್ಟಿದ್ದರು. ಸದ್ಯ ಬಂಗಾರಪೇಟೆ ಪೊಲೀಸರು ಈ ಕೃತ್ಯದಲ್ಲಿ ಶಾಮೀಲಾಗಿದ್ದಾನೆ ಎನ್ನಲಾದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
