ಮುಡಾ ಕೇಸ್: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದ ಜಮೀರ್ ಅಹಮ್ಮದ್ಗೆ ಸಂಕಷ್ಟ
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ಕೋರ್ಟ್ ತನಿಖೆಗೆ ಆದೇಶಿಸಿವೆ. ಇನ್ನು ಇತ್ತ ಸಚಿವ ಜಮೀರ್ ಅಹಮ್ಮದ್ ಖಾನ್ ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡುವ ಭರದಲ್ಲಿ ಹೈಕೋರ್ಟ್ ಆದೇಶದ ಬಗ್ಗೆ ಕೇವಲವಾಗಿ ಮಾತನಾಡಿದ್ದು, ಇದೀಗ ಅವರಿಗೆ ಸಂಕಷ್ಟ ತಂದಿಟ್ಟಿದೆ.
ಉಡುಪಿ, (ಸೆಪ್ಟೆಂಬರ್ 26): ಮುಡಾ ಪ್ರಕರಣದಲ್ಲಿ (MUDA Case) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಹೈಕೋರ್ಟ್ (High Court) ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹಗುರವಾಗಿ ಮಾತನಾಡಿದ್ದಾರೆ. ಹೈಕೋರ್ಟ್ ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದು ತನಿಖೆಗೆ ಆದೇಶಿಸಿದ್ದು ರಾಜಕೀಯ ತೀರ್ಪು ಎಂದು ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಇದು ಇದೀಗ ಜಮೀರ್ ಅಹಮ್ಮದ್ ಖಾನ್ಗೆ ಸಂಕಷ್ಟ ತಂದೊಡ್ಡಿದೆ. ಹೌದು….ಈ ಸಂಬಂಧ ಬಿಜೆಪಿ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಕಿಡಿಕಾರಿದೆ. ಅಲ್ಲದೇ ಈ ಬಗ್ಗೆ ಕಾನೂನು ಹೋರಾಟಕ್ಕೆ ಟಿಜೆ ಅಬ್ರಹಾಂ ನಿರ್ಧರಿಸಿದ್ದಾರೆ.
ಉಡುಪಿಯಲ್ಲಿ ಇಂದು(ಸೆಪ್ಟೆಂಬರ್ 26) ಸುದ್ದಿಗಾರರೊಂದಿಗೆ ಮಾತನಾಡಿದ ಮುಡಾ ಪ್ರಕರಣದ ದೂರುದಾರರಲ್ಲೊಬ್ಬರಾದ, ಹಿರಿಯ ವಕೀಲ ಟಿಜೆ ಅಬ್ರಹಾಂ (TJ Abraham), ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡುವುದು ಎಂದರೆ ಹುಡುಗಾಟನಾ. ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಸ್ಪಷ್ಟಪಡಿಸಿದರು.
ರಾಜಕಾರಣದಲ್ಲಿ ಭಾಷಣ ಬಿಗಿದ ಹಾಗೆ ಮಾತನಾಡಿದರೆ ಆಗುತ್ತಾ? ನಾಲಿಗೆ ಬಿಗಿಯಿಲ್ಲದೆ ಮಾತನಾಡಿದ್ದು ಸರಿಯಲ್ಲ. ಈ ತೀರ್ಪನ್ನು ಪೊಲಿಟಿಕಲ್ ಆದೇಶ ಎಂದು ಹೇಳುತ್ತಾರೆ. ನ್ಯಾಯಾಧೀಶರನ್ನು ರಾಜಕಾರಣಿಗಳ ಲೆವೆಲ್ಲಿಗೆ ಇಳಿಸುತ್ತೀರಾ? ನ್ಯಾಯಾಲಯ ದ ಬಗ್ಗೆ ಭಯ ಭಕ್ತಿ ಬೇಡ್ವಾ. ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಗೊತ್ತಿದೆಯಾ. ನನ್ನ ಬಗ್ಗೆ ಮಾತನಾಡಿ ಪರ್ವಾಗಿಲ್ಲ. ನ್ಯಾಯಾಲಯದ ಬಗ್ಗೆ ಎಷ್ಟು ಕ್ಯಾಶುಯಲ್ ಆಗಿ ಮಾತಾಡ್ತೀರಾ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.