Toll Price Hike: ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಕರ್ನಾಟಕದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಮತ್ತೆ ಏರಿಕೆಯಾಗಿದೆ. ನೆಲಮಂಗಲದಿಂದ ಹಾಸನ ಮಾರ್ಗದ ದೇವಿಹಳ್ಳಿ ಟೋಲ್‌ನಲ್ಲಿ ಕಾರು, ಲಘು ವಾಣಿಜ್ಯ ವಾಹನ ಹಾಗೂ ಬಸ್, ಟ್ರಕ್‌ಗಳಿಗೆ ₹5 ರಿಂದ ₹10 ಗಳಷ್ಟು ಹೆಚ್ಚಳವಾಗಿದೆ. ರೈತರು ಸೇರಿದಂತೆ ವಾಹನ ಸವಾರರು ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಹೆಚ್ಚುವರಿ ಆರ್ಥಿಕ ಹೊರೆಯನ್ನು ಸೃಷ್ಟಿಸಿದೆ ಎಂದಿದ್ದಾರೆ. ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ.
ನೆಲಮಂಗಲ, ಸೆಪ್ಟೆಂಬರ್ 1: ವಾಹನ ಸವಾರರಿಗೆ ಮತ್ತೊಂದು ಆರ್ಥಿಕ ಹೊರೆ ಬಿದ್ದಿದೆ. ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಮತ್ತೆ ಏರಿಕೆಯಾಗಿದ್ದು, ಇಂದಿನಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ವಿಶೇಷವಾಗಿ ನೆಲಮಂಗಲದಿಂದ ಹಾಸನಕ್ಕೆ ತೆರಳುವ ಮಾರ್ಗದ ದೇವಿಹಳ್ಳಿ ಟೋಲ್‌ನಲ್ಲಿ ಶುಲ್ಕದಲ್ಲಿ ₹5 ರಿಂದ ₹10 ಗಳಷ್ಟು ಹೆಚ್ಚಳವಾಗಿದೆ. ಕಾರುಗಳಿಗೆ ಪ್ರತಿದಿನದ ಏಕಮುಖ ಸಂಚಾರಕ್ಕೆ ₹60 ಇದ್ದ ಶುಲ್ಕದಲ್ಲಿ ಬದಲಾವಣೆಯಾಗದೆ, ದಿನದ ಸಂಚಾರಕ್ಕೆ (ಮಲ್ಟಿಪಲ್ ಎಂಟ್ರಿ) ₹85 ಇದ್ದ ಶುಲ್ಕ ₹90 ಕ್ಕೆ ಏರಿದೆ. ಲಘು ವಾಣಿಜ್ಯ ವಾಹನಗಳ ಶುಲ್ಕವು ₹100 ರಿಂದ ₹105 ಕ್ಕೆ ಏರಿಕೆಯಾಗಿದೆ. ಇದಲ್ಲದೆ, ಬಸ್‌ಗಳು ಮತ್ತು ಟ್ರಕ್‌ಗಳಿಗೂ ಕೂಡ ₹5 ರಿಂದ ₹10 ಗಳಷ್ಟು ಹೆಚ್ಚಳವಾಗಿದೆ.
ಈ ಶುಲ್ಕ ಹೆಚ್ಚಳಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಅನೇಕ ರೈತರು, ನಿರಂತರವಾಗಿ ಹೆದ್ದಾರಿಗಳನ್ನು ಬಳಸುವವರು, ಈ ಶುಲ್ಕ ಹೆಚ್ಚಳದಿಂದ ತಮಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ‘ಸರ್ಕಾರ ಯಾವಾಗಲೂ ರೈತರ ಮೇಲೆ ಹೊರೆ ಹಾಕುತ್ತಿದೆ’ ಎಂದು ಕೆಲವರು ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
