ರೇವ್ ಪಾರ್ಟಿ ಮಾಡಿ ಸಿಕ್ಕಿ ಬಿದ್ದು ಮುಖ ಮುಚ್ಕೊಂಡು ಓಡಿದ ಸೆಲೆಬ್ರಿಟಿಗಳು
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಿಕ್ಕಿ ಬಿದ್ದಿದ್ದಾರೆ. ಸಿಸಿಬಿ ಅಧಿಕಾರಿಗಳು ಸ್ಥಳ ಮಹಜರು ಮಾಡಿದ ನಂತರ ಫಾರ್ಮ್ಹೌಸ್ನಿಂದ ಹೊರಬಂದ ಸೆಲೆಬ್ರಿಟಿಗಳು ಕೈಗೆ ಸಿಕ್ಕ ವಸ್ತುಗಳಿಂದ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಎಲ್ಲಿಲ್ಲದ ಸರ್ಕಸ್ ಮಾಡಿದ್ದಾರೆ.
ಟಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಬೆಂಗಳೂರಿಗೆ ಬಂದು ರೇವ್ ಪಾರ್ಟಿ (Rave Party) ಮಾಡಿರುವುದು ಬೆಳಕಿಗೆ ಬಂದಿದೆ. ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ಫಾರ್ಮ್ಹೌಸ್ವೊಂದಕ್ಕೆ ದಾಳಿ ಮಾಡಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತೆಲುಗು ಚಿತ್ರರಂಗದ (Telugu Film Industry) ಅನೇಕರು ಈ ಪಾರ್ಟಿಯಲ್ಲಿ ಭಾಗಿ ಆಗಿರುವುದು ತಿಳಿದುಬಂದಿದೆ. ಹಲವು ಗಂಟೆಗಳ ಕಾಲ ವಿಚಾರಣೆ ಮತ್ತು ಸ್ಥಳ ಮಹಜರು ಮಾಡಿದ ಬಳಿಕ ಸೆಲೆಬ್ರಿಟಿಗಳನ್ನು ಬಿಟ್ಟು ಕಳಿಸಲಾಗಿದೆ. ಫಾರ್ಮ್ಹೌಸ್ನಿಂದ ಹೊರಬರುವಾಗ ಎಲ್ಲ ಸೆಲೆಬ್ರಿಟಿಗಳು ಮುಖ ತೋರಿಸಲಾಗದೇ ಪರದಾಡಿದ್ದಾರೆ. ಕೈಗೆ ಸಿಕ್ಕ ಬಟ್ಟೆ, ಪಾಸ್ಟಿಕ್ ಕವರ್, ಮಾಸ್ಕ್ ಮುಂತಾದ್ದನ್ನು ಮುಖಕ್ಕೆ ಅಡ್ಡ ಹಿಡಿದುಕೊಂಡು ಎಸ್ಕೇಪ್ ಆಗಿದ್ದಾರೆ. ಮಾಧ್ಯಮಗಳ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಒಬ್ಬೊಬ್ಬರು ಒಂದೊಂದು ರೀತಿ ಸರ್ಕಸ್ ಮಾಡಿದ್ದಾರೆ. ಈ ಕೇಸ್ನಲ್ಲಿ ಆರು ಜನರನ್ನು ಬಂಧಿಸಲಾಗಿದೆ. ಇನ್ನುಳಿದವರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ಪಡೆಯಲಾಗಿದೆ. ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಅವರನ್ನು ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.