ಮತ್ತಷ್ಟು ದುಬಾರಿಯಾದ ಟೊಮ್ಯಾಟೋ; ಕೋಲಾರದಲ್ಲಿ 15 ಕೆಜಿ ಬಾಕ್ಸ್ 2200 ರೂ.
ನಿನ್ನೆ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಹದಿನೈದು ಕೆಜಿ ಬಾಕ್ಸ್ ಟೊಮ್ಯಾಟೋ 1600 ರೂಪಾಯಿಗೆ ಹರಾಜಾಗಿತ್ತು, ಇಂದು ಅದೇ ಟೊಮ್ಯಾಟೋ 2200 ರೂಪಾಯಿ ಇದೆ.
ಕೋಲಾರ: ಕಳೆದೊಂದು ತಿಂಗಳಿಂದ ಟೊಮ್ಯಾಟೋ ಬೆಲೆಯಲ್ಲಿ(Tomato Rate) ಗಣನೀಯವಾದ ಏರಿಕೆ ಕಾಣುತ್ತಿದೆ. ಜೂನ್ ಮೊದಲ ವಾರದಲ್ಲಿ ಆರಂಭವಾದ ಟೊಮ್ಯಾಟೋ ಬೆಲೆ ಏರಿಕೆ ನಿರಂತರವಾಗಿ ಏರಿಕೆ ಕಾಣುತ್ತಲೇ ಇದೆ. 800 ರಿಂದ 1000 ರೂಪಾಯಿ ಆರಂಭವಾದ 15 ಕೆಜಿ ಬಾಕ್ಸ್ ಟೊಮ್ಯಾಟೋ ಬೆಲೆ ಇಂದಿಗೆ 2200 ರೂಪಾಯಿಗೆ ಬಂದು ನಿಂತಿದೆ. ನಿನ್ನೆ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ(Kolar APMC Market) ಹದಿನೈದು ಕೆಜಿ ಬಾಕ್ಸ್ ಟೊಮ್ಯಾಟೋ 1600 ರೂಪಾಯಿಗೆ ಹರಾಜಾಗಿತ್ತು, ಇಂದು ಅದೇ ಟೊಮ್ಯಾಟೋ 2200ರೂಪಾಯಿ ಇದೆ.
ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಎಪಿಎಂಸಿ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ದೇಶದ ಬಹುತೇಕ ಎಲ್ಲಾ ರಾಜ್ಯಳಿಂದಲೂ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಾಗಿ ಮಳೆಯಾಗುತ್ತಿದ್ದು ಅಲ್ಲಿ ಬೆಳೆಯಲ್ಲಾ ಸಂಪೂರ್ಣವಾಗಿ ಹಾಳಾಗಿದೆ ಪರಿಣಾಮ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆದ ಟೊಮ್ಯಾಟೋಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಕೋಲಾರ ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿರುವ ಟೊಮ್ಯಾಟೋಗೆ ವೈರಸ್ ರೋಗ ಬಾದೆ ಕಾಡುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬಂದಿಲ್ಲ. ಹಾಗಾಗಿ ಈ ಬೆಲೆ ಮತ್ತಷ್ಟು ಏರಿಕೆ ಕಾಣುವ ಹಾಗೂ ಹದಿನೈದು ಕೆಜಿ ಬಾಕ್ಸ್ ಟೊಮ್ಯಾಟೋ ಬೆಲೆ ಇನ್ನೆರಡು ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಕೋಲಾರ ಎಪಿಎಂಸಿ ಮಾರುಟಕಟ್ಟೆಯಲ್ಲಿ ಸದ್ಯ ಮೂರು ವಿಧದ ಟೊಮ್ಯಾಟೋ ಸದ್ಯ ಬರುತ್ತಿದೆ, ನಾಟಿ, ಸೀಡ್ಸ್, ಹಾಗೂ ಗೋಲಿ ಟೊಮ್ಯಾಟೋ ಇದೆ, ನಾಟಿ ಟೊಮ್ಯಾಟೋ ಬಾಕ್ಸ್ಗೆ 1750 ರೂಪಾಯಿಗೆ ಹರಾಜಾಗಿದ್ದರೆ, ಸೀಡ್ಸ್ ಟೊಮ್ಯಾಟೋ 1800 ರಿಂದ 1850 ರೂಪಾಯಿಗೆ ಹರಾಜಾಗಿದೆ. ಇನ್ನು ಗೋಲಿ ಟೊಮ್ಯಾಟೋ ಕೂಡಾ 1000 ರೂಪಾಯಿ ಗಡಿ ದಾಟಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ವೆಂಕಟರಮಣ ಅವರ ಟೊಮ್ಯಾಟೊ 2200 ರೂ.ಗಳಿಗೆ ಮಾರಾಟವಾಗಿದೆ. ಇನ್ನು ಸೀಡ್ಸ್ ಹಾಗೂ ನಾಟಿ ಟೊಮ್ಯಾಟೋ ಒಂದು ಕೆಜಿಗೆ ಹತ್ತು ಅಥವಾ ಅನ್ನೊಂದು ಟೊಮ್ಯಾಟೋ ಬರುತ್ತದೆ ಒಂದು ಕೆಜಿ ಟೊಮ್ಯಾಟೋಗೆ 130ರೂಪಾಯಿ ಇದೆ.
ಅಂದರೆ ಒಂದು ಟೊಮ್ಯಾಟೋಗೆ 13 ರಿಂದ 14 ರೂಪಾಯಿ ಬೆಲೆ ಇದೆ. ಹಾಗಾಗಿ ಚಿನ್ನದ ನಾಡು ಕೋಲಾರದಲ್ಲಿ ಟೊಮ್ಯಾಟೋಗೆ ಚಿನ್ನದ ಬೆಲೆಯೇ ಬಂದಿದೆ. ಕೆಂಪು ಸುಂದರಿ ಕಿಚನ್ ಕ್ವೀನ್ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದ್ದು ಮುಂದಿನ ದಿನಗಳಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುವ ಸಾಧ್ಯತೆ ಕೂಡಾ ಹೆಚ್ಚಾಗಿದೆ.