ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನ, ಪೂಜೆಗೆ ನಿರ್ಬಂಧ: ಮೂರ್ತಿ ಸಂರಕ್ಷಣೆಗೆ ದತ್ತಿ ಇಲಾಖೆ ಕ್ರಮ

Edited By:

Updated on: Jul 24, 2026 | 11:05 AM

Gokarna Mahaganapathi Idol: ಗೋಕರ್ಣ ಮಹಾಗಣಪತಿ ಮೂರ್ತಿಯಲ್ಲಿ ಸವಕಳಿ ಕಂಡುಬಂದ ಹಿನ್ನೆಲೆಯಲ್ಲಿ ಸ್ಪರ್ಶ ದರ್ಶನ, ಪೂಜೆ ಹಾಗೂ ಪಂಚಾಮೃತ ಅಭಿಷೇಕಕ್ಕೆ ನಿರ್ಬಂಧ ವಿಧಿಸಲಾಗಿದೆ. ಭಕ್ತರಿಗೆ ದೂರದಿಂದ ದರ್ಶನಕ್ಕೆ ಅವಕಾಶ ಮುಂದುವರಿಯಲಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಸುಧಾ ತಳವಾರ ಹೇಳಿದ್ದಾರೆ.

ಕಾರವಾರ, ಜುಲೈ 24: ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇಗುಲದ ಮಹಾಗಣಪತಿ ಗುಡಿಯಲ್ಲಿ ಇನ್ನುಮುಂದೆ ಭಕ್ತರು ಮೂರ್ತಿಯನ್ನು ಸ್ಪರ್ಶಿಸಿ ದರ್ಶನ ಪಡೆಯುವಂತಿಲ್ಲ. ಅಲ್ಲದೆ, ನೇರವಾಗಿ ಪೂಜೆ, ಪಂಚಾಮೃತ ಅಭಿಷೇಕ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಗಣಪತಿ ಮೂರ್ತಿಯಲ್ಲಿ ಸವಕಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಸುಧಾ ತಳವಾರ ತಿಳಿಸಿದ್ದಾರೆ.

ಸಾವಿರಾರು ಭಕ್ತರು ಪ್ರತಿದಿನ ಸ್ಪರ್ಶ ದರ್ಶನ ಹಾಗೂ ಅಭಿಷೇಕ ನಡೆಸುತ್ತಿದ್ದ ಪರಿಣಾಮ ಮೂರ್ತಿಗೆ ಸವಕಳಿ ಉಂಟಾಗಿದ್ದು, ಇನ್ನುಮುಂದೆ ಅರ್ಚಕರು ಮಾತ್ರ ಪಾಳಿ ಪ್ರಕಾರ ನಿತ್ಯ ಪೂಜೆ ಹಾಗೂ ನೈವೇದ್ಯ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಭಕ್ತರಿಗೆ ದೂರದಿಂದಲೇ ದರ್ಶನ ಪಡೆಯಲು ಅವಕಾಶ ಮುಂದುವರಿಯಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಪುರಾತತ್ವ ಇಲಾಖೆಯ ಅನುಮತಿ ಪಡೆದು ಮುಂದಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಮೈಸೂರು ಆಗಮ ಪಂಡಿತರ ಅಭಿಪ್ರಾಯ ಪಡೆಯಲಾಗಿದ್ದು, ಧಾರ್ಮಿಕವಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, 2015ರಲ್ಲೇ ಸ್ಪರ್ಶ ಪೂಜೆಯನ್ನು ನಿಷೇಧಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪತ್ರ ನೀಡಿದ್ದರು ಎಂಬುದನ್ನೂ ಸುಧಾ ತಳವಾರ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 24, 2026 09:51 AM
Loading...
Unable to load recommendations.
Follow Us
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More