ಅನರ್ಹರೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ, ಇದು ನಿಲ್ಲಬೇಕು: ಸತೀಶ್ ಜಾರಕಿಹೊಳಿ
ಯಾವುದೇ ಯೋಜನೆ ಜಾರಿ ಮಾಡಿದರೂ ಅದು ಫೂಲ್ಪ್ರೂಫ್ ಅಗಿರಲ್ಲ, ಆಗಾಗ ತಿದ್ದುಪಾಟುಗಳನ್ನು ಮಾಡಬೇಕಾಗುತ್ತದೆ, ಈ ಮಾತು ಎಲ್ಲ ಸರ್ಕಾರಗಳಿಗೆ ಅನ್ವಯಿಸುತ್ತದೆ, ಜನಪರ ಯೋಜನೆಗಳನ್ನು ರೂಪಿಸುವಾಗ ಒಂದಷ್ಟು ಅಂಶಗಳು ಗಣನೆಗೆ ಬಾರದೆ ಹೋಗಿರುತ್ತವೆ, ಅವುಗಳನ್ನು ನಂತರ ಸೇರಿಸಬೇಕಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರು: ನಗರದ ತಮ್ಮ ಕಚೇರಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದು ತಾನ್ಯಾವತ್ತು ಹೇಳಿಲ್ಲ ಆದರೆ ಅನೇಕ ಅನರ್ಹರು ಯೋಜನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಅದನ್ನು ನಿಲ್ಲಿಸಿ ಕೇವಲ ಬಡವರಿಗೆ ಮಾತ್ರ ಯೋಜನೆಗಳ ಫಲ ದಕ್ಕುವಂತಾಗಬೇಕೆಂದು ಸರ್ಕಾರಕ್ಕೆ ತಿಳಿಸಿದ್ದೇನೆ ಎಂದರು. ಅಮೇರಿಕದಲ್ಲಿ ವೈದ್ಯ ಮತ್ತು ಇಂಜಿನೀಯರ್ ಗಳಾಗಿ ಕೆಲಸ ಮಾಡುವವರ ಕುಟುಂಬಗಳ ಸದಸ್ಯರು ಸಹ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿ ಬಡವರ ಪಾಲು ಮತ್ತು ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ, ಇದನ್ನು ನಿಲ್ಲಿಸಿ ಕೇವಲ ಬಡವರಿಗೆ ಮಾತ್ರ ಯೋಜನೆಗಳ ಲಾಭ ಸಿಗುವಂತಾಗಬೇಕು ಎಂದು ಜಾರಕಿಹೊಳಿ ಹೇಳಿದರು. ಇದನ್ನು ಮಾಡೋದು ಹೇಗೆ? ಸರ್ಕಾರಕ್ಕೆ ಯಾವುದಾದರೂ ಸಲಹೆ ನೀಡಿದ್ದೀರಾ ಅಂತ ಕೇಳಿದರೆ ಸರ್ಕಾರವೇ ಚಿಂತನೆ ನಡೆಸಬೇಕು ಎಂದು ಸಚಿವ ಹೇಳಿದರು. ಬಸ್ ನಲ್ಲಿ ಪ್ರಯಾಣಿಸುವಾಗ ಟಿಕೆಟ್ ಖರೀದಿಸುವ ಶಕ್ತಿಯುಳ್ಳವರು ಸಹ ಆಧಾರ್ ಕಾರ್ಡ್ ತೋರಿಸಿ ಪುಕ್ಕಟ್ಟೆ ಪ್ರಯಾಣ ಮಾಡುತ್ತಾರೆ, ಹಾಗೆಯೇ ಸ್ಥಿತಿವಂತರು ಸಹ ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಭಿವೃದ್ಧಿ ಯೋಜನೆಗಳಿಗೆ ಹಣ ಸಿಗ್ತಿಲ್ಲ: ಹೈಕಮಾಂಡ್ ಮುಂದೆ ಗ್ಯಾರಂಟಿ ಯೋಜನೆ ಪರಿಷ್ಕರಣೆಗೆ ಸಚಿವರ ಡಿಮ್ಯಾಂಡ್