ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ, ವಿದ್ಯಾರ್ಥಿಗಳು ಅದರ ಬಗ್ಗೆ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಬೇಕು: ದೇವನೂರು ಮಹಾದೇವ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 12, 2022 | 7:57 PM

ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವ ತಾಯಂದಿರು ಶಿಕ್ಷಣ ಕೇಂದ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕಂಡು ಆತಂಕಿತರಾಗಿದ್ದಾರೆ. ಆದರೆ ಇದು ನಿಲ್ಲದೆ ಹೋದರೆ ಅವರ ಆತಂಕ ಆಕ್ರೋಷದಲ್ಲಿ ಬದಲಾಗುತ್ತದೆ. ಸಂಬಂಧಪಟ್ಟವರು ಇದನ್ನು ಗಮನಿಸಬೇಕು ಎಂದು ಮಹಾದೇವ ಅವರು ಎಚ್ಚರಿಸುತ್ತಾರೆ.

ರಾಜ್ಯದಲ್ಲಿ ಹಿಜಾಬ್ ವಿವಾದ ಸೃಷ್ಟಿಸಿರುವ ಕೋಲಾಹಲ ತಮಗೆ ಬಹಳ ದುಃಖ ತಂದಿದೆ ಎಂದು ಖ್ಯಾತ ಸಾಹಿತಿ ದೇವನೂರು ಮಹಾದೇವ (Devanur Mahadeva) ಹೇಳಿದರು. ಶನಿವಾರ ಮೈಸೂರಿನಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು ಮೊದಲೆಲ್ಲ ಹಿಜಾಬ್ (hijab) ಚರ್ಚೆಯ ವಿಷಯವಾಗಿರಲಿಲ್ಲ ಆದರೆ ಅದನ್ನು ನಿಷೇಧಿಸಬೇಕೆಂಬ ಅಗ್ರಹ ಶುರುವಾದಾಗ ವಿವಾದದ ರೂಪ ತಳೆಯಲಾರಂಭಿಸಿತು. ಅದರಲ್ಲೂ ಕೇಸರಿ ಬಣ್ಣ (saffron colour) ಹಿಜಾಬ್ ವಿರುದ್ಧ ಪ್ರತಿಭಟಿಸಲು ಆರಂಭಿಸಿದ ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ಅವರು ಹೇಳಿದರು. ಕೇಸರಿ ಬಣ್ಣದ ವ್ಯಾಪಕತೆ, ಅದ್ದೂರಿತನ ಮತ್ತು ಶ್ರೀಮಂತಿಕೆ ನೋಡುತ್ತಿದ್ದರೆ ಇದು ವಿದ್ಯಾರ್ಥಿಗಳಿಂದ ಉದ್ಭವಿಸಿದ ಸ್ಥಿತಿ ಅಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಪರಿಸ್ಥಿತಿ ಉಲ್ಬಣಿಸುವಂತಾಗುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ (vested interests) ಮತ್ತು ರಾಜಕೀಯ ನಾಯಕರ ಕೈವಾಡವಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಅವರಿಗೆ ಇದಕ್ಕಿಂತ ಪ್ರಶಸ್ತವಾದ ಅವಕಾಶ ಬೇರೆ ಸಿಗಲಾರದು ಎಂದು ಸಾಹಿತಿಗಳು ಹೇಳಿದರು. ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದು ದುಷ್ಟತನದ ಪರಾಮಾವಧಿ ಎಂದು ಅವರು ಹೇಳಿದರು.

ಇದನ್ನು ಹೀಗೆಯೇ ಮುಂದುವರಿಯಲು ಬಿಟ್ಟರೆ, ಹೆಣ್ಣುಮಕ್ಕಳು ಗುಲಾಬಿ, ರೈತರ ಮಕ್ಕಳು ಹಸಿರು, ಕಾರ್ಮಿಕರ ಮಕ್ಕಳು ಕೆಂಪು, ದಲಿತರ ಮಕ್ಕಳು ನೀಲಿ, ದ್ರಾವಿಡರು ಕಪ್ಪು, ಹಿಂದುಳಿದ ವರ್ಗದವರು ಹಳದಿ ಹೀಗೆ ಬಗೆಬಗೆ ಬಣ್ಣದ ಪೋಷಾಕುಗಳಲ್ಲಿ ಮಕ್ಕಳು ಶಾಲೆಗಳಿಗೆ ಬರಲಾರಂಭಿಸುತ್ತಾರೆ; ಇವರ ನಡುವೆ ಶಾಂತಿ ಬಯಸುವವರು ಬಿಳಿಯುಡುಗೆ ಧರಿಸುತ್ತಾರೆ, ಎಂದು ಮಹಾದೇವ ಹೇಳಿದರು.

ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವ ತಾಯಂದಿರು ಶಿಕ್ಷಣ ಕೇಂದ್ರಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕಂಡು ಆತಂಕಿತರಾಗಿದ್ದಾರೆ. ಆದರೆ ಇದು ನಿಲ್ಲದೆ ಹೋದರೆ ಅವರ ಆತಂಕ ಆಕ್ರೋಷದಲ್ಲಿ ಬದಲಾಗುತ್ತದೆ. ಸಂಬಂಧಪಟ್ಟವರು ಇದನ್ನು ಗಮನಿಸಬೇಕು ಎಂದು ಮಹಾದೇವ ಅವರು ಎಚ್ಚರಿಸುತ್ತಾರೆ.

ವಿದ್ಯಾರ್ಥಿಗಳು ಒಂದು ವಿಷಯ ಅರ್ಥಮಾಡಿಕೊಳ್ಳಬೇಕು. ಈ ಬಗೆಯ ಭಾವನಾತ್ಮಕತೆ ಅವರ ಭವಿಷ್ಯ ರೂಪಿಸಲಾರದು. ಬೇರೆಯವರು ಕೈಗೊಂಬೆಗಳಾಗಿದ್ದೇವೆ ಎಂಬ ಅಂಶವನ್ನು ಅವರು ತಿಳಿಯಬೇಕು. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಹಿಜಾಬ್ ಬದಲು ಅವರು ಇದರ ಬಗ್ಗೆ ಪ್ರಶ್ನೆ ಎತ್ತಬೇಕು. ಈ ಬಾರಿಯ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅತಿ ಕಡಿಮೆ ಮೊತ್ತವನ್ನು ನಿಗದಿಪಡಿಸಲಾಗಿದೆ. ನಮ್ಮ ಮಕ್ಕಳು ವಿದ್ಯಾವಂತರಾಗುವುದು ಸರ್ಕಾರಕ್ಕೆ ಬೇಕಿಲ್ಲ ಅನ್ನೋದು ಇದರಿಂದ ವೇದ್ಯವಾಗುತ್ತದೆ. ನಮ್ಮ ಮೂಲಭೂತ ಅವಶ್ಯಕತೆಯಾಗಿರುವ ಆರೋಗ್ಯದ ಬಗ್ಗೆಯೂ ಸರ್ಕಾರಕ್ಕೆ ಕಾಳಜಿ ಇಲ್ಲ. ವಿದ್ಯಾರ್ಥಿಗಳು ಸರ್ಕಾರಕ್ಕೆ ಕೇಳಬೇಕಿರುವ ಪ್ರಶ್ನೆಗಳು ಇವೇ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು.

ಇದನ್ನೂ ಓದಿ:   ‘ಎಂಥಾ ಮೂರ್ಖ ಪ್ರಶ್ನೆ ಇದು’; ಆನ್​ಲೈನ್ ಸಂದರ್ಶನದಲ್ಲಿ ವಿಡಿಯೋ ಆನ್​ ಆಗಿದ್ದು ತಿಳಿಯದೇ ಯುವತಿ ಬೈದ ದೃಶ್ಯ ಇದೀಗ ವೈರಲ್