‘ಎಂಥಾ ಮೂರ್ಖ ಪ್ರಶ್ನೆ ಇದು’; ಆನ್ಲೈನ್ ಸಂದರ್ಶನದಲ್ಲಿ ವಿಡಿಯೋ ಆನ್ ಆಗಿದ್ದು ತಿಳಿಯದೇ ಯುವತಿ ಬೈದ ದೃಶ್ಯ ಇದೀಗ ವೈರಲ್
ಆನ್ಲೈನ್ನಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಯುವತಿಯೋರ್ವರು ಸಂದರ್ಶನಕ್ಕೂ ಮುನ್ನವೇ ವಿಡಿಯೋ ಆನ್ ಮಾಡಿದ್ದರು. ನಂತರ ನಡೆದ ಘಟನೆಯ ವಿಡಿಯೋವೊಂದು ಇದೀಗ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ.
ಕೊರೊನಾ (Covid) ನಂತರ ಹೆಚ್ಚಿನ ಕೆಲಸಗಳು, ಮೀಟಿಂಗ್ಗಳು ಆನ್ಲೈನ್ ಮಾಧ್ಯಮಕ್ಕೆ ವರ್ಗಾಯಿಸಲ್ಪಟ್ಟಿದೆ. ಆದರೆ ಇದು ಎಲ್ಲರಿಗೂ ಇನ್ನೂ ಹೊಂದಿಕೆಯಾಗಿಲ್ಲ. ಇದೇ ಕಾರಣಕ್ಕೆ ಮೀಟಿಂಗ್ನಲ್ಲಿ ಅಥವಾ ಕೆಲಸದ ನಡುವೆ ಅಚಾತುರ್ಯಗಳು ಸಂಭವಿಸುತ್ತಿರುತ್ತವೆ. ಅಲ್ಲದೇ ಇವುಗಳು ವೈರಲ್ (Viral Video) ಆಗುವುದೂ ಇದೆ. ಇಂಥದ್ದೇ ಒಂದು ಪ್ರಕರಣ ಇದೀಗ ವರದಿಯಾಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಿದ್ದುಬಿದ್ದು ನಕ್ಕಿದ್ದಾರೆ. ಅಂಥದ್ದೇನಾಯ್ತು ಅಂತೀರಾ? ಸ್ಕೈವೆಸ್ಟ್ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಹುದ್ದೆಗೆ ಸಂದರ್ಶನಕ್ಕೆ (Interview) ಕರೆಯಲಾಗಿತ್ತು. ಇದಕ್ಕೆ ಯುವತಿಯೋರ್ವರು ಸಂದರ್ಶನ ನೀಡಿದ್ದರು. ಚೈಲೀನ್ ಮಾರ್ಟಿನೆಜ್ ಎಂಬ ಯುವತಿ ಸಂದರ್ಶನಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ವಿಡಿಯೋವನ್ನು ಆನ್ ಮಾಡಲು ಹೇಳಲಾಗಿತ್ತು. ಸಂದರ್ಶನದಲ್ಲಿ ‘ಸ್ಕೈವೆಸ್ಟ್ ಕಂಪನಿಯ ಸಂಸ್ಕೃತಿಯ ಬಗ್ಗೆ ನಿಮ್ಮ ಅನಿಸಿಕೆ ಏನು? ಹಾಗೂ ಅದರ ಬಗ್ಗೆ ನಿಮ್ಮ ನಿಲುವೇನು?’ ಎಂಬ ಪ್ರಶ್ನೆ ಕೇಳಲಾಗಿತ್ತು. ಮಿರರ್ ಆನ್ಲೈನ್ ವರದಿಯ ಪ್ರಕಾರ ಮಾರ್ಟಿನೆಜ್ ಅವರು ತಮ್ಮ ಟಿಕ್ಟಾಕ್ ಖಾತೆಯಲ್ಲಿ ಸಂದರ್ಶನದಲ್ಲಿ ಎಡವಟ್ಟಾಗಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಪ್ರಶ್ನೆ ಕೇಳಿದಾಗ ಮಾರ್ಟಿನೆಜ್ ಇದಕ್ಕೆ ಉತ್ತರಿಸಿಲ್ಲ. ಬದಲಾಗಿ ಅಲ್ಲೊಂದು ಅಚಾತುರ್ಯ ನಡೆದಿದೆ. ಹೌದು. ಅವರು ಸಂದರ್ಶನಕ್ಕೂ ಮುನ್ನವೇ ವಿಡಿಯೋವನ್ನು ಆನ್ ಮಾಡಿದ್ದರು. ಆದ್ದರಿಂದ ಅವರಿಗೆ ಪ್ರಶ್ನೆ ಕೇಳಿದಾಗ ಮಾರ್ಟಿನೆಜ್ ಅವರ ಪ್ರತಿಕ್ರಿಯೆಗಳು ದಾಖಲಾಗುತ್ತಿದ್ದವು. ಇದನ್ನು ಮರೆತಿದ್ದ ಮಾರ್ಟಿನೆಜ್, ಆ ಪ್ರಶ್ನೆಗೆ ಸ್ನೇಹಿತರೊಂದಿಗೆ ಮಾತನಾಡುತ್ತಾ ಬೈಯುತ್ತಿದ್ದರು. ‘‘ಜೀವನದಲ್ಲಿ ಓದಿದ ಅತ್ಯಂತ ಮೂರ್ಖತನದ ಪ್ರಶ್ನೆ ಇದು’ ಎಂದು ಆ ಪ್ರಶ್ನೆಯ ಬಗ್ಗೆ ಅವರು ಫೋನ್ನಲ್ಲಿ ಮಾತನಾಡುತ್ತಾ ಹೇಳುತ್ತಿದ್ದರು.
ಮಾರ್ಟಿನೆಜ್ ಅವರ ಮಾತುಗಳೆಲ್ಲವೂ ರೆಕಾರ್ಡ್ ಆಗಿ ಸಂದರ್ಶನಕಾರರಿಗೆ ತಲುಪಿದ್ದವು. ಮಾರ್ಟಿನೆಜ್ ಕೇವಲ ಆ ಪ್ರಶ್ನೆಗೆ ಬೈದಿರಲಿಲ್ಲ. ಬದಲಾಗಿ ‘ಆ ಪ್ರಶ್ನೆಗೆ ಉತ್ತರ ಹೇಳಲು ರೆಕಾರ್ಡ್ ಬೇರೆ ಆನ್ ಮಾಡಬೇಕಂತೆ’ ಎಂದೂ ಫೋನ್ನಲ್ಲಿ ಮಾತನಾಡಿದ್ದರು. ಅಲ್ಲದೇ ಆ ಪ್ರಶ್ನೆಗೆ ಏನು ಉತ್ತರ ಹೇಳಬಹುದು ಎಂದು ಯೋಚಿಸಿದ್ದನ್ನೂ ಹೇಳಿಕೊಂಡಿದ್ದರು.
ಕೆಲ ಹೊತ್ತಿನ ನಂತರ ಯುವತಿಗೆ ಈಗಾಗಲೇ ರೆಕಾರ್ಡ್ ಆಗುತ್ತಿದೆ ಎಂಬುದು ಅರಿವಾಗಿದೆ. ಅದನ್ನು ಅವರು ಬಹಳ ಅಪನಂಬಿಕೆಯಿಂದ ನೋಡಿದ್ದಾರೆ. ಅಲ್ಲದೇ ‘ಓಹ್.. ಕ್ಷಮಿಸಿ..’ ಎಂದು ಸಂದರ್ಶನಕಾರರಲ್ಲಿ ಕ್ಷಮೆ ಕೇಳಿದ್ದಾರೆ. ನಂತರ ‘ನಾನು ಪ್ರಾಕ್ಟೀಸ್ ಮಾಡುತ್ತಿದ್ದೆ’ ಎಂದು ಅಚಾತುರ್ಯಕ್ಕೆ ಸಮರ್ಥನೆ ನೀಡಲು ಯತ್ನಿಸಿ, ವಿಡಿಯೋ ಆಫ್ ಮಾಡಿದ್ದಾರೆ.
ಸಂದರ್ಶನದ ಮಜವಾದ ವಿಡಿಯೋ ಇಲ್ಲಿದೆ:
ಈ ವಿಡಿಯೋಕ್ಕೆ ‘ನಿಮಗೆ ಸಂದರ್ಶನದಲ್ಲಿ ಒಮ್ಮೆ ಮಾತ್ರ ಉತ್ತರ ಹೇಳಲು ಅವಕಾಶವಿದೆ ಎಂದುಕೊಳ್ಳಿ. ಆದರೆ ಅಚಾನಕ್ಕಾಗಿ ನೀವು ಮೊದಲೇ ರೆಕಾರ್ಡಿಂಗ್ ಆನ್ ಮಾಡುತ್ತೀರಿ’’ ಎಂದು ಕ್ಯಾಪ್ಶನ್ ನೀಡಲಾಗಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ.
ಇದನ್ನೂ ಓದಿ:
‘ನೀಲಿಚಿತ್ರ ಅತಿಯಾಗಿ ನೋಡುವವರಿಗೆ ಕಿಸ್ ಮಾಡೋಕೆ ಬರಲ್ಲ’; ಬಿಗ್ ಬಾಸ್ ಸ್ಪರ್ಧಿಯ ವಿಚಿತ್ರ ಹೇಳಿಕೆ