ಉಕ್ರೇನ್​ ಮೇಲೆ ಶೀಘ್ರದಲ್ಲೇ ದಾಳಿ ಮಾಡಲಿದೆ ರಷ್ಯಾ ?!-48 ಗಂಟೆಯಲ್ಲಿ ಉಕ್ರೇನ್​ ತೊರೆಯಲು ತನ್ನ ಪ್ರಜೆಗಳಿಗೆ ಸೂಚಿಸಿದ ಅಮೆರಿಕ​ ಶ್ವೇತ ಭವನ

TV9kannada Web Team

TV9kannada Web Team | Edited By: Lakshmi Hegde

Updated on: Feb 12, 2022 | 4:10 PM

ರಷ್ಯಾ ಇದೀಗ ಪಾಶ್ಚಿಮಾತ್ಯ ನಿರ್ಬಂಧಗಳನ್ನು ತೀವ್ರವಾಗಿಸುತ್ತಿದೆ. ಉಕ್ರೇನ್​​ಗೆ ಬೆಂಬಲವಾಗಿ ನಿಂತಿರುವ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (North Atlantic Treaty Organization- NATO )ಯ ಪಡೆಯನ್ನು ವಾಪಸ್​ ಕಳಿಸಲು ಎಲ್ಲ ರೀತಿಯ ಪ್ರಯತ್ನವನ್ನೂ ಪುತಿನ್ ಮಾಡುತ್ತಿದ್ದಾರೆ.

ಉಕ್ರೇನ್​ ಮೇಲೆ ಶೀಘ್ರದಲ್ಲೇ ದಾಳಿ ಮಾಡಲಿದೆ ರಷ್ಯಾ ?!-48 ಗಂಟೆಯಲ್ಲಿ ಉಕ್ರೇನ್​ ತೊರೆಯಲು ತನ್ನ ಪ್ರಜೆಗಳಿಗೆ ಸೂಚಿಸಿದ ಅಮೆರಿಕ​ ಶ್ವೇತ ಭವನ
ಶ್ವೇತ ಭವನದ ರಾಷ್ಟ್ರೀಯ ಕಾರ್ಯದರ್ಶಿ ಸಲಹೆಗಾರ ಜೇಕ್​ ಸುಲ್ಲಿವಾನ್​

ಉಕ್ರೇನ್​ ಮತ್ತು ರಷ್ಯಾ (Russia) ನಡುವೆ ಯುದ್ಧದ ಕಾರ್ಮೋಡ ಕವಿದು ಹಲವು ದಿನಗಳೇ ಕಳೆದಿವೆ. ಯುಎಸ್​ ಸೇರಿ ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್​ (Ukraine)ಬೆಂಬಲಕ್ಕೆ ನಿಂತಿವೆ. ಇಷ್ಟೆಲ್ಲದರ ಮಧ್ಯೆ ಯುಎಸ್​ ಉಕ್ರೇನ್​​ನಲ್ಲಿರುವ ಅಮೆರಿಕ ಪ್ರಜೆಗಳಿಗೆ ಶುಕ್ರವಾರ ಎಚ್ಚರಿಕೆಯೊಂದನ್ನು ನೀಡಿದ್ದು, ಇನ್ನು 48ಗಂಟೆಗಳಲ್ಲಿ ಉಕ್ರೇನ್​ನಿಂದ ವಾಪಸ್​ ದೇಶಕ್ಕೆ ತೆರಳಿ ಎಂದು ಹೇಳಿದೆ. ಶೀಘ್ರದಲ್ಲೇ ರಷ್ಯಾ, ಉಕ್ರೇನ್​ ಮೇಲೆ ವೈಮಾನಿಕ ದಾಳಿ ನಡೆಸಲು ಪ್ರಾರಂಭ ಮಾಡಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ದಾಳಿಯಲ್ಲಿ ಸಿಲುಕಿ ಸಂಕಷ್ಟಕ್ಕೀಡಾಗುವ ಮೊದಲೇ ಉಕ್ರೇನ್ ತೊರೆದುಬಿಡಿ ಎಂದು ಯುಎಸ್​ ತನ್ನ ನಾಗರಿಕರಿಗೆ ಹೇಳಿದೆ ಎಂದು ಅಮೆರಿಕ ಶ್ವೇತ ಭವನದ (White House) ರಾಷ್ಟ್ರೀಯ ಕಾರ್ಯದರ್ಶಿ ಸಲಹೆಗಾರ ಜೇಕ್​ ಸುಲ್ಲಿವಾನ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಉಕ್ರೇನ್​ ಮೇಲೆ ದಾಳಿ ನಡೆಸಲು ರಷ್ಯಾದ ಲಕ್ಷಕ್ಕೂ ಹೆಚ್ಚು ಸೈನಿಕರು ಸಿದ್ಧವಾಗಿ ನಿಂತಿದ್ದಾರೆ. ಯಾವಾಗ, ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ.

ರಷ್ಯಾದ ನೆರೆರಾಷ್ಟ್ರ ಚೀನಾದ ಬೀಜಿಂಗ್​​ನಲ್ಲಿ ಚಳಿಗಾಲದ ಒಲಿಂಪಿಕ್​ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ಸರ್ಕಾರ ಈಗ ಉಕ್ರೇನ್​ ಮೇಲೆ ದಾಳಿಯಂತ ಇನ್ಯಾವುದೇ ಬಿಕ್ಕಟ್ಟನ್ನೂ ಉಂಟು ಮಾಡುವುದಿಲ್ಲ ಎಂಬ ವಿಶ್ಲೇಷಣೆಯನ್ನೆಲ್ಲ ಅಲ್ಲಗಳೆದ ಅವರು, ಹಾಗೆಲ್ಲ ಅಂದುಕೊಳ್ಳುವುದು ಸುಮ್ಮನೆ. ಫೆ.20ಕ್ಕೆ ಒಲಿಂಪಿಕ್​ ಮುಗಿಯುತ್ತದೆ. ಅಷ್ಟರೊಳಗೆ ರಷ್ಯಾ ಉಕ್ರೇನ್​ ಮೇಲೆ ದಾಳಿ ನಡೆಸಿದರೂ ಆಶ್ಚರ್ಯವಿಲ್ಲ ಎಂದಿದ್ದಾರೆ. ರಷ್ಯಾ ಮತ್ತು ಉಕ್ರೇನ್​ ನಡುವಿನ ಬಿಕ್ಕಟ್ಟನ್ನು ಶಮನ ಮಾಡುವ ಪ್ರಯತ್ನದ ಭಾಗವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೇಲ್​ ಮ್ಯಾಕ್ರೇನ್​ ರಷ್ಯಾಕ್ಕೆ ಭೇಟಿ ನೀಡಿ ಪುತಿನ್​​ರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಹಾಗೇ, ಯುಎಸ್ ಅಧ್ಯಕ್ಷ ಜೋ ಬೈಡನ್​ ಕೂಡ ಪುತಿನ್​​ರಿಗೆ ಕರೆ ಮಾಡಿ ಮಾತನಾಡಲಿದ್ದಾರೆ ಎಂದೂ ಶ್ವೇತ ಭವನದ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ರಷ್ಯಾ ಇದೀಗ ಪಾಶ್ಚಿಮಾತ್ಯ ನಿರ್ಬಂಧಗಳನ್ನು ತೀವ್ರವಾಗಿಸುತ್ತಿದೆ. ಉಕ್ರೇನ್​​ಗೆ ಬೆಂಬಲವಾಗಿ ನಿಂತಿರುವ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (North Atlantic Treaty Organization- NATO )ಯ ಪಡೆಯನ್ನು ವಾಪಸ್​ ಕಳಿಸಲು ಎಲ್ಲ ರೀತಿಯ ಪ್ರಯತ್ನವನ್ನೂ ಪುತಿನ್ ಮಾಡುತ್ತಿದ್ದಾರೆ. ಹಾಗಿದ್ದಾಗ್ಯೂ ಕೂಡನ ನ್ಯಾಟೋ ಅತ್ಯುತ್ತಮವಾಗಿ, ಹಿಂದೆಂದಿಗಿಂತಲೂ ಮಿಗಿಲಾದ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ನ್ಯಾಟೋ ತನ್ನ ಉದ್ದೇಶವನ್ನು ತುಂಬ ಚೆನ್ನಾಗಿ ಅರಿತುಕೊಂಡು, ಕ್ರಿಯಾತ್ಮಕವಾಗಿ ಮುಂದುವರಿಯುತ್ತಿದೆ ಎಂದೂ ಜೇಕ್​ ಸುಲ್ಲಿವಾನ್​ ತಿಳಿಸಿದ್ದಾರೆ. ಅಂದಹಾಗೇ, ನ್ಯಾಟೋ ಎಂಬುದು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸೇನಾ ಒಕ್ಕೂಟವಾಗಿದೆ. ಉಕ್ರೇನ್​ ವಿರುದ್ಧ ನ್ಯಾಟೋ ಶಕ್ತಿಯನ್ನು ಬಲಪಡಿಸಿಲು ಅಮೆರಿಕ ಕಳೆದ ತಿಂಗಳು ತನ್ನ ಸೇನೆಯ 3000 ಯೋಧರನ್ನು ಪೂರ್ವ ಯುರೋಪ್​​ಗೆ ಕಳಿಸಿತ್ತು.

ದಾಳಿ ಮಾಡುವ ಯೋಜನೆಯಿಲ್ಲ: ರಷ್ಯಾದ ನೌಕಾಪಡೆ ಸೇರಿ ಇನ್ನಿತರ ಘಟಕಗಳ ಸೈನಿಕರು ಉಕ್ರೇನ್​ನ ದಕ್ಷಿಣ, ಪೂರ್ವ ಮತ್ತು ಉತ್ತರ ಭಾಗದಲ್ಲಿ ಸುತ್ತುವರಿದಿವೆ. ಹಾಗಿದ್ದಾಗ್ಯೂ ಕೂಡ ರಷ್ಯಾ ತಾನು ಉಕ್ರೇನ್​ ಮೇಲೆ ಆಕ್ರಮಣ ಮಾಡುವ ಯಾವುದೇ ಯೋಜನೆ, ಯೋಚನೆಯನ್ನು ಹೊಂದಿಲ್ಲ ಎಂದು ಹೇಳಿದೆ. ಆದರೆ 2014ರಲ್ಲಿ ವಶಪಡಿಸಿಕೊಂಡಿರುವ ಕ್ರಿಮಿಯಾ ಪ್ರದೇಶದ ಮೇಲೆ ರಷ್ಯಾ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಲ್ಲದೆ, ಉಕ್ರೇನ್​ನ ಡಾನ್​ಬಾಸ್​ ಪ್ರದೇಶದಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುತ್ತಿದೆ. ಈ ಬಂಡುಕೋರರು ಈಗಾಗಲೇ  ಡಾನ್​ಬಾಸ್​ನ್ನು ನಿಯಂತ್ರಣಕ್ಕೆ ತೆಗೆದುಕೊಂಡಿವೆ.  ನಾವು ಉಕ್ರೇನ್​ ಮೇಲೆ ದಾಳಿ ಮಾಡುವುದಿಲ್ಲ. ಆದರೆ ನ್ಯಾಟೋದಲ್ಲಿ ಉಕ್ರೇನ್​ಗೆ ಸದಸ್ಯತ್ವ ಕೊಡಬಾರದು ಎಂಬುದು ನಮ್ಮ ಬಲವಾದ ಆಗ್ರಹ ಎಂದೂ ರಷ್ಯಾ ಸರ್ಕಾರ ಹೇಳಿಕೊಂಡಿದೆ.

ಇದನ್ನೂ ಓದಿ: ಟಿವಿ 9 ವರದಿ ಫಲಶೃತಿ: ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದ ಶಿಕ್ಷಕನ ಅಮಾನತು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada