ಉಪವಾಸ ಸತ್ಯಾಗ್ರಹ ನಿರತ ರೈತ ಮುಖಂಡರ ಜೊತೆ ಸಭೆ ನಡೆಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದ ಕೇಂದ್ರ ತಂಡ ಮತ್ತು ರೈತ ಪ್ರತಿನಿಧಿಗಳ ಜೊತೆ ಶುಕ್ರವಾರ ಸಭೆ ನಡೆಸಿತು. ಎರಡೂ ಕಡೆಯವರು ಇದು ಸೌಹಾರ್ದಯುತ ಸಭೆಯಾಗಿದ್ದು, ಮುಂದಿನ ಸುತ್ತಿನ ಮಾತುಕತೆ ಫೆಬ್ರವರಿ 22ರಂದು ನಡೆಯಲಿದೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರ ರೈತ ಸಮುದಾಯದ ಕಲ್ಯಾಣಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಲ್ಹಾದ್ ಜೋಶಿ ಮಾತನಾಡಿದಾಗ, ರೈತ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಬಲವಾಗಿ ಮಂಡಿಸಿದರು. ಫೆಬ್ರವರಿ 22 ರಂದು ರೈತ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೇಂದ್ರ ತಂಡದ ನೇತೃತ್ವ ವಹಿಸಲಿದ್ದಾರೆ ಎಂದು ಜೋಶಿ ಹೇಳಿದರು. ಆ ಸಭೆಯಲ್ಲಿ ತಾವೂ ಭಾಗವಹಿಸುವುದಾಗಿ ಜೋಶಿ ಹೇಳಿದರು.
ನವದೆಹಲಿ: ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಈ ವರ್ಷವಿಡೀ ನಡೆದ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ರೈತ ಸಂಘದ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ ನಡೆಸಿದರು. ಈ ಸಭೆಯ ಬಳಿಕ ಮಾತನಾಡಿದ ಅವರು, “ನಾವು ಪಂಜಾಬ್ ಸರ್ಕಾರದೊಂದಿಗೆ ರಾಜಕೀಯೇತರ ರೈತ ಸಂಘವಾದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರನ್ನು ಭೇಟಿ ಮಾಡಿದ್ದೇವೆ. ಈ ಭೇಟಿಯ ವೇಳೆ ನಡೆದ ಚರ್ಚೆಗಳು ಸಕಾರಾತ್ಮಕವಾಗಿತ್ತು. ರೈತರ ಬೇಡಿಕೆಗಳನ್ನು ವಿವರವಾಗಿ ಆಲಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗಾಗಿ ಯಾವ ರೀತಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿದೆ ಎಂಬುದನ್ನು ನಾನು ವಿವರಿಸಿದೆ” ಎಂದು ಮಾಹಿತಿ ನೀಡಿದ್ದಾರೆ.
“ನಾನು ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಬಳಿ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದೇನೆ. ಅವರು ಕೂಡ ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಶೀಘ್ರದಲ್ಲೇ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ. ನಾವು ರೈತರನ್ನು ಮತ್ತೊಮ್ಮೆ ಭೇಟಿ ಮಾಡಲು ನಿರ್ಧರಿಸಿದ್ದೇವೆ. ಫೆಬ್ರವರಿ 22ರಂದು ನಾವು ಮತ್ತೆ ರೈತರು ಮತ್ತು ರೈತ ಸಂಘಗಳೊಂದಿಗೆ ಚರ್ಚೆ ನಡೆಸುತ್ತೇವೆ. ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ನಾವು ಮತ್ತೆ ಚರ್ಚೆಗಳನ್ನು ನಡೆಸುತ್ತೇವೆ” ಎಂದು ಪ್ರಲ್ಹಾದ್ ಜೋಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಳೆ ಖರೀದಿ ಮತ್ತು ಕೃಷಿ ವಲಯಕ್ಕೆ ಬಜೆಟ್ ವೆಚ್ಚದಲ್ಲಿ ಹೆಚ್ಚಳದ ಬಗ್ಗೆ ಮೋದಿ ಸರ್ಕಾರ ರೈತರ ಕಲ್ಯಾಣಕ್ಕಾಗಿ ತೆಗೆದುಕೊಂಡ ಕ್ರಮಗಳ ಕುರಿತು ವಿವರಗಳನ್ನು ಹಂಚಿಕೊಂಡಿದ್ದೇನೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಬೆಳೆಗಳ ಮೇಲೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ 28 ಸದಸ್ಯರ ನಿಯೋಗವು ರೈತರ ಪ್ರತಿಭಟನೆಯ ಪರವಾಗಿ ನೇತೃತ್ವ ವಹಿಸಿದ್ದ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವದ ತಂಡ ಪಾಲ್ಗೊಂಡು ಅವರ ಸಮಸ್ಯೆಗಳನ್ನು ಆಲಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ