ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Updated on: Jul 03, 2025 | 8:27 PM

ಅಮರನಾಥ ಯಾತ್ರೆಯ ಯಾತ್ರಿಕರೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿಕೊಂಡರು. ಈ ವಾತಾವರಣವು ತುಂಬಾ ಆಹ್ಲಾದಕರವಾಗಿದೆ ಎಂದು ಅವರು ಹೇಳಿದರು. ಭಕ್ತಿಯಿಂದ ತುಂಬಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಮರನಾಥ ಯಾತ್ರೆಗೆ ಪಾದಯಾತ್ರೆ ಮಾಡಿದರು. 2025ರ ಅಮರನಾಥ ಯಾತ್ರೆಯ ಭಾಗವಾಗಿದ್ದಕ್ಕೆ ಶೋಭಾ ಕರಂದ್ಲಾಜೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಅಲ್ಲಿನ ವ್ಯವಸ್ಥೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀನಗರ, ಜುಲೈ 3: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಇಂದು (ಗುರುವಾರ) ಮಧ್ಯ ಕಾಶ್ಮೀರದ ಗಂದೇರ್ಬಲ್ ಜಿಲ್ಲೆಯ ಬಾಲ್ಟಾಲ್ ಮೂಲ ಶಿಬಿರದಿಂದ ಅಮರನಾಥ ಪವಿತ್ರ ಗುಹೆಗೆ ಭಕ್ತರ ಜೊತೆ ಪಾದಯಾತ್ರೆಯನ್ನು ಕೈಗೊಂಡರು. ಅಮರನಾಥ ಗುಹೆಗೆ (Amarnath Cave) ತೆರಳಿ ಹಿಮಲಿಂಗದ ದರ್ಶನ ಪಡೆದರು. ದುರ್ಗಮವಾದ ಹಾದಿಯಲ್ಲಿ ಕಾಲ್ನಡಿಗೆಯಲ್ಲೇ ಸಚಿವೆ ಶೋಭಾ ಕರಂದ್ಲಾಜೆ ಅಮರನಾಥ ಯಾತ್ರೆ ಮುಗಿಸಿದರು. ಪಾದಯಾತ್ರೆಗೂ ಮೊದಲು ಶೋಭಾ ಕರಂದ್ಲಾಜೆ ಇಂದು ಮುಂಜಾನೆ ಬಾಲ್ಟಾಲ್ ಮೂಲ ಶಿಬಿರಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ, ಭಕ್ತರೊಂದಿಗೆ ಸಂವಹನ ನಡೆಸಿದರು. 2025ರ ಅಮರನಾಥ ಯಾತ್ರೆಯ ಭಾಗವಾಗಿದ್ದಕ್ಕೆ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. “ಇಂದು, ನಾವೆಲ್ಲರೂ ಭೋಲೆನಾಥನ ದರ್ಶನ ಪಡೆಯಲಿದ್ದೇವೆ. ಇದು ಅದ್ಭುತವೆನಿಸುತ್ತದೆ. ದೇವರು ನಮ್ಮೆಲ್ಲರನ್ನೂ ಆಶೀರ್ವದಿಸಲಿ. ಇಲ್ಲಿನ ವಾತಾವರಣ ಬಹಳ ಆಹ್ಲಾದಕರವಾಗಿದೆ” ಎಂದು ಅವರು ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Jul 03, 2025 08:27 PM