ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ಸೆಲೆಬ್ರೇಷನ್ಗೆ ಆಗಮಿಸಿ ನಿರಾಸೆಯಿಂದ ವಾಪಸ್
ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ವಿಶ್ವವಿಖ್ಯಾತ ನಂದಿಗಿರಿಧಾಮವನ್ನು ಬಂದ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಡಿಸಿ ಪ್ರಭುಜಿ ಅವರು ಈ ಆದೇಶ ಹೊರಡಿಸಿದ್ದು, ವಿಶೇಷವಾಗಿ ಭಗ್ನ ಪ್ರೇಮಿಗಳು ಆತ್ಮಹತ್ಯೆ ಯತ್ನಿಸುವ ಆತಂಕ ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಚಿಕ್ಕಬಳ್ಳಾಪುರ, ಫೆಬ್ರವರಿ 14: ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಂದಿಬೆಟ್ಟಕ್ಕೆ ಪ್ರವೇಶ ಬಂದ್ ಮಾಡಲಾಗಿದೆ. ಆದಾಗ್ಯೂ ಬೆಳ್ಳಂಬೆಳಗ್ಗೆ ಅನೇಕ ಪ್ರೇಮಿಗಳು ಪ್ರವೇಶ ದ್ವಾರದ ವರೆಗೂ ಬಂದು ನಿರಾಸೆಯಿಂದ ವಾಪಸ್ ಆದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭುಜಿ ಅವರು ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಿದ್ದಾರೆ. ಪ್ರೇಮಿಗಳ ದಿನದಂದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು, ವಿಶೇಷವಾಗಿ ಪ್ರೇಮಿಗಳು ಮತ್ತು ಭಗ್ನ ಪ್ರೇಮಿಗಳು ನಂದಿಗಿರಿಧಾಮಕ್ಕೆ ಬರುವ ಸಾಧ್ಯತೆ ಇದೆ. ಭಗ್ನ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸುವಂತಹ ಆತಂಕವಿತ್ತು. ಅಂತಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ.

