ವಾಲ್ಮೀಕಿ ನಿಗಮ ಹಗರಣ: ವಿಧಾನಸೌಧದಲ್ಲಿ ಬಸನಗೌಡ ದದ್ದಲ್ ಪ್ರತ್ಯಕ್ಷ, ಹೇಳಿದ್ದೇನು ನೋಡಿ
ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದ್ದ ಕಾಂಗ್ರೆಸ್ ಶಾಸಕ, ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸನಗೌಡ ದದ್ದಲ್ ಸೋಮವಾರ ವಿಧಾನಸಭೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅವರು ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯುಟಿ ಖಾದರ್ ಜತೆ ಸಮಾಲೋಚನೆ ನಡೆಸಿ ತನಿಖೆ ಬಗ್ಗೆ ವಿವರಣೆ ನೀಡಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಬಳಿ ದದ್ದಲ್ ಹೇಳಿದ್ದೇನು ಎಂಬ ವಿಡಿಯೋ ಇಲ್ಲಿದೆ.
ಬೆಂಗಳೂರು, ಜುಲೈ 15: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿದ್ದು, ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ, ನಿಗಮ ಅಧ್ಯಕ್ಷ ಬಸನಗೌಡ ದದ್ದಲ್ ಸೋಮವಾರ ವಿಧಾನಸಭೆಯ ಕಾರಿಡಾರ್ನಲ್ಲಿ ಪ್ರತ್ಯಕ್ಷರಾದರು. ಸೀದಾ ಸಿಎಂ ಸಿದ್ದರಾಮಯ್ಯ ಕಚೇರಿಗೆ ಬಂದ ಅವರು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದರು.
ವಿಧಾನಸಭೆ ಸ್ಪೀಕರ್ ಯುಟಿ ಖಾದರ್ರನ್ನೂ ಭೇಟಿಯಾದ ದದ್ದಲ್, ತನಿಖೆ ಬಗ್ಗೆ ಸ್ಪೀಕರ್ ಖಾದರ್ಗೆ ವಿವರಣೆ ನೀಡಿದರು. ಬಸನಗೌಡ ದದ್ದಲ್ ನಾಪತ್ತೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾನು ಎಲ್ಲೂ ಹೋಗಿಲ್ಲ ಎಂದರು.
ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಲು ಮುಂದಾದಾಗ ಹೇಳಿಕೆ ನೀಡಲು ನಿರಾಕರಿಸಿ ಮುಂದುವರಿದ ದದ್ದಲ್ ಕೊನೆಯಲ್ಲಿ, ‘ನಾನು ಎಲ್ಲೂ ಹೋಗಿಲ್ಲ. ತಲೆಮರೆಸಿಕೊಂಡಿಲ್ಲ. ಊರಿಗೆ ಹೋಗಿದ್ದೆ ಅಷ್ಟೆ’ ಎಂದು ಉತ್ತರಿಸಿ ವಿಧಾನಸೌಧದೊಳಕ್ಕೆ ತೆರಳಿದರು.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಶಾಸಕ ಬಸನಗೌಡ ದದ್ದಲ್ ಅಜ್ಞಾತ ಸ್ಥಳಕ್ಕೆ
ಶುಕ್ರವಾರ ವಿಚಾರಣೆ ಸಂಬಂಧ ಎಸ್ಐಟಿ ಮುಂದೆ ಹಾಜರಾಗಿದ್ದ ದದ್ದಲ್ ನಂತರ ಬೆಂಗಳೂರಿನ ನಿವಾಸಕ್ಕೆ ಬಂದಿರಲಿಲ್ಲ. ಕುಟುಂಬಸ್ಥರ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಅವರ ಮನೆ ಕೆಲಸದವರು, ದದ್ದಲ್ ಕುಟುಂಬ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ