ವಿಜಯಪುರ: ವಿಮಾನ ನಿಲ್ದಾಣದ ಜೊತೆಗೆ ಪೈಲಟ್ ಟ್ರೈನಿಂಗ್ ಸೆಂಟರ್ ಆರಂಭಕ್ಕೆ ಪ್ಲಾನ್
ವಿಜಯಪುರ ವಿಮಾನ ನಿಲ್ದಾಣದ ಉದ್ಘಾಟನೆ ಹಂತಕ್ಕೆ ಬಂದಿದ್ದು, ಸುಪ್ರೀಂಕೋರ್ಟ್‌ನ ತಡೆಯಾಜ್ಞೆಯನ್ನೂ ನಿವಾರಿಸಲಾಗಿದೆ. ಇದರ ಜೊತೆಗೆ ಮಹಾರಾಷ್ಟ್ರದ ಖ್ಯಾತ ಕಾರ್ವರ್ ಏವಿಯೇಷನ್ ಸಂಸ್ಥೆಯು ಇಲ್ಲಿ ಪೈಲಟ್ ತರಬೇತಿ ಶಾಲೆ ಆರಂಭಿಸಲು ಆಸಕ್ತಿ ತೋರಿದೆ. ಇದು ಉತ್ತರ ಕರ್ನಾಟಕದ ಯುವಕರಿಗೆ ಪೈಲಟ್ ಆಗುವ ಕನಸನ್ನು ನನಸು ಮಾಡಲು ಸ್ಥಳೀಯ ಅವಕಾಶಗಳನ್ನು ಸೃಷ್ಟಿಸಲಿದೆ.
ವಿಜಯಪುರ: ಉತ್ತರ ಕರ್ನಾಟಕದ ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣದ ಉದ್ಘಾಟನೆ ಕೊನೆಗೂ ಸನ್ನಿಹಿತವಾಗಿದ್ದು, ಇದರ ಬೆನ್ನಲ್ಲೇ ಜಿಲ್ಲೆಗೆ ಮತ್ತೊಂದು ಬೃಹತ್ ಕೊಡುಗೆ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಸುಮಾರು 618.75 ಕೋಟಿ ರೂಪಾಯಿ ವೆಚ್ಚದಲ್ಲಿ ರನ್‌ವೇ, ಟ್ಯಾಕ್ಸಿ ವೇ, ಏಪ್ರಾನ್ ಹಾಗೂ ಪ್ರಯಾಣಿಕರ ಅಧುನಿಕ ಟರ್ಮಿನಲ್ ಸೇರಿದಂತೆ ಪ್ರಮುಖ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಈಗ ಈ ವಿಮಾನ ನಿಲ್ದಾಣದಲ್ಲಿ ಪೈಲಟ್ ತರಬೇತಿ ಶಾಲೆ (Pilot Training School) ಆರಂಭಿಸಲು ಗಂಭೀರ ಚಿಂತನೆ ನಡೆದಿದೆ. ಮಹಾರಾಷ್ಟ್ರದ ಬಾರಾಮತಿ ಮೂಲದ ಖ್ಯಾತ ‘ಕಾರ್ವರ್ ಏವಿಯೇಷನ್’ ಸಂಸ್ಥೆಯ ಅಧಿಕಾರಿಗಳು ಇತ್ತೀಚೆಗೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಲ್ಲಿನ ವಾತಾವರಣ ಹಾಗೂ ಮೂಲಸೌಕರ್ಯಗಳು ತರಬೇತಿ ಕೇಂದ್ರಕ್ಕೆ ಪೂರಕವಾಗಿವೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಯೋಜನೆಗೆ ಅಂತಿಮ ಮುದ್ರೆ ಬಿದ್ದರೆ, ವಿಜಯಪುರ ಹಾಗೂ ಸುತ್ತಮುತ್ತಲ ಭಾಗದ ಯುವಜನರು ಸ್ಥಳೀಯವಾಗಿಯೇ ಪೈಲಟ್ ತರಬೇತಿ ಪಡೆದು ಗಗನಕ್ಕೇರುವ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
