ವಿಜಯಪುರದಲ್ಲಿ ಕಾಯ್ದಿರಿಸಲಾಗಿದ್ದ ಇವಿಎಂ, ವಿವಿಪ್ಯಾಟ್ ಮಷಿನ್‌ಗಳನ್ನು ಒಡೆದು ಹಾಕಿದ ಗ್ರಾಮಸ್ಥರು
ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ.
ವಿಜಯಪುರ: ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಕಾಯ್ದಿರಿಸಲಾಗಿದ್ದ ಇವಿಎಂ ಮಷಿನ್ ಹಾಗೂ ವಿವಿಪ್ಯಾಟ್ ಮಷಿನ್‌ಗಳನ್ನು ಗ್ರಾಮಸ್ಥರು ಒಡೆದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಮಶೀನ್‌ಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರುತ್ತಿದ್ದ ವೇಳೆ ಘಟನೆ ನಡೆದಿದೆ.
ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ್ದಾರೆ. ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಲಾಗಿದೆ. ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮತಯಂತ್ರ ಕೆಟ್ಟಲ್ಲಿ ಬಳಕೆ ಮಾಡಲು ಇವಿಎಂ, ವಿವಿಪ್ಯಾಟ್ ಮಷಿನ್‌ಗಳನ್ನು ರಿಸರ್ವ್ ಇಡಲಾಗಿತ್ತು. ಆದ್ರೆ ವಾಪಸ್ ತರೋದನ್ನ ಗಮನಿಸಿ ಜನರು ಸಿಬ್ಬಂದಿಗಳನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಸರಿಯಾಗಿ ಉತ್ತರಿಸದೇ ಇದ್ದಾಗ, ತಪ್ಪುಭಾವಿಸಿ ಮತಯಂತ್ರ ಒಡೆದು ಹಾಕಿದ್ದಾರೆ. ಸ್ಥಳಕ್ಕೆ ಚುನಾವಣಾ ಅಧಿಕಾರಿಗಳ ದೌಡಾಯಿಸಿದ್ದಾರೆ.
ಇವಿಎಂ ನಾಶ ಮಾಡಿದವರ ಬಂಧನ
ಇನ್ನು ಘಟನಾ ಸ್ಥಳಕ್ಕೆ ಡಿಸಿ ವಿಜಯಕುಮಾರ ದಾನಮ್ಮನವರ ಹಾಗೂ ಎಸ್ಪಿ ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಹೆಚ್ಚುವರಿ ಇವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳನ್ನು ಕಾರಿನಲ್ಲಿ ತರಲಾಗುತ್ತಿತ್ತು. ಮಸಬಿನಾಳ ಗ್ರಾಮದ ಜನರು ತಪ್ಪು ಮಾಹಿತಿಯಿಂದ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ಧಾರೆ. ಇವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳನ್ನು ಪುಡಿ ಪುಡಿ ಮಾಡಿದ್ದಾರೆ. ಸಿಬ್ಬಂದಿ ಬಳಕೆ ಮಾಡಿದ ಕಾರನ್ನು ಪಲ್ಟಿ ಮಾಡಿ ಹಾನಿ ಮಾಡಿದ್ದಾರೆ. ಘಟನೆಗೆ ಕಾರಣವಾದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಗಲಾಟೆ ಮಾಡಿದ ಕೆಲವರನ್ನು ಬಂಧಿಸಿಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು. ಇದು ಕಾನೂನು ಬಾಹೀರ ಕೆಲಸ. ಯಾರೇ ಆಗಲಿ ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗಲಾಟೆಯಲ್ಲಿ ಭಾಗಿಯಾಗಿರೋ 20 ರಿಂದ 25 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಂಥ ಘಟನೆಗಳಲ್ಲಿ ಯಾರಾದರೂ ಭಾಗಿಯಾದರೆ ಅವರ ಮೇಲೂ ಆ್ಯಕ್ಸನ್ ಫಿಕ್ಸ್ ಎಂದು ಎಸ್ಪಿ ಆನಂದ ಕುಮಾರ ಎಚ್ಚರಿಕೆ ನೀಡಿದ್ದಾರೆ. ಸದ್ಯ ಮಸಬಿನಾಳ ಗ್ರಾಮದಲ್ಲಿ ಪರಸ್ಥಿತಿ ಹತೋಟಿಗೆ ಬಂದಿದೆ.
ಕರ್ನಾಟಕ ಚುನಾವಣೆ 2023 ಲೈವ್ ಅಪ್ಡೇಟ್ಸ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ