Viral Video: ಬಾವುಟ ಹಿಡಿದು ಡ್ಯಾನ್ಸ್ ಮಾಡುವಾಗಲೇ ಪ್ರಾಣ ಬಿಟ್ಟ ಸೈನಿಕ; ಚಪ್ಪಾಳೆ ತಟ್ಟಿದ ಜನ!
ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಉಚಿತ ಯೋಗ ಶಿಬಿರದಲ್ಲಿ ದೇಶಭಕ್ತಿ ಗೀತೆ "ಮಾ ತುಜೆ ಸಲಾಂ" ಹಾಡುತ್ತಾ ಡ್ಯಾನ್ಸ್ ಮಾಡುತ್ತಿದ್ದಾಗ ಯೋಗ ತರಬೇತುದಾರ ಹಾಗೂ ನಿವೃತ್ತ ಸೈನಿಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮಧ್ಯಪ್ರದೇಶದ ಇಂದೋರ್ (Indore) ಯೋಗ ಕೇಂದ್ರದಲ್ಲಿ ಆಸ್ತ ಯೋಗ ಕ್ರಾಂತಿ ಅಭಿಯಾನದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗು ಮತ್ತು ತೂಕ ಇಳಿಸುವ ಯೋಗಕ್ಕೆ (Weight Loss Yoga) ಹೆಸರಾದ ಬಲ್ವಿಂದರ್ ಸಿಂಗ್ ಛಾಬ್ರಾ (Balwinder Singh Chhabra) ಎಂಬ ನಿವೃತ್ತ ಸೈನಿಕ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಅವರು ನೆಲಕ್ಕೆ ಬಿದ್ದಿದ್ದಾರೆ. ಆದರೆ, ಇದು ಕೂಡ ಡ್ಯಾನ್ಸ್ನ ಒಂದು ಭಾಗವೆಂದು ತಿಳಿದ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾ ಕುಳಿತಿದ್ದಾರೆ. ಬಹಳ ಹೊತ್ತಾದ ನಂತರವೂ ಅವರು ಮೇಲಕ್ಕೆ ಏಳದ ಹಿನ್ನೆಲೆಯಲ್ಲಿ ಹತ್ತಿರ ಹೋಗಿ ನೋಡಿದಾಗ ಅವರು ಸಾವನ್ನಪ್ಪಿರುವುದು ಗೊತ್ತಾಗಿದೆ.
ಸೈನಿಕನ ಯೂನಿಫಾರಂ ಹಾಕಿ, ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡೇ ಬಲ್ವಿಂದರ್ ಸಿಂಗ್ ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಸಿಪಿಆರ್ ಪಡೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಛಾಬ್ರಾ ಅವರ ಕುಟುಂಬವು ಅವರ ಕೊನೆಯ ವಿಧಿಗಳಿಗೂ ಮೊದಲು ಅವರ ಕಣ್ಣುಗಳು, ಚರ್ಮ ಮತ್ತು ಇತರ ಅಂಗಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಬಲ್ವಿಂದರ್ ಸಿಂಗ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ