Visakhapatnam Tragedy: ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು, ಹೆಚ್​ಡಿಕೆ ಭೇಟಿ

Updated on: Jun 09, 2026 | 9:15 AM

ವಿಶಾಖಪಟ್ಟಣಂ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಸ್ಥಾವರದಲ್ಲಿ ಕರಗಿದ ಕಬ್ಬಿಣವನ್ನು ಸಾಗಿಸುತ್ತಿದ್ದ ಲ್ಯಾಡಲ್ ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ಕ್ರೇನ್ ಮೂಲಕ ಲ್ಯಾಡಲ್ ಎತ್ತುವಾಗ ಈ ದುರಂತ ಸಂಭವಿಸಿದ್ದು, ಬಿಸಿ ಲೋಹ ಚೆಲ್ಲಿ ಪ್ರಾಣಹಾನಿ ಉಂಟಾಗಿದೆ. ಸ್ಫೋಟಕ್ಕೆ ಸ್ಲೈಡ್ ಗೇಟ್ ವೈಫಲ್ಯ ಕಾರಣ ಎನ್ನಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ವಿಶಾಖಪಟ್ಟಣಂ, ಜೂನ್ 09: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಭೀಕರ ದುರಂತ ಸಂಭವಿಸಿದೆ. ಕರಗಿದ ಕಬ್ಬಿಣವನ್ನು ಸಾಗಿಸುತ್ತಿದ್ದ ಲ್ಯಾಡಲ್ ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಘಟನೆಯು ಕಂಟಿನ್ಯೂಯಸ್ ಕ್ಯಾಸ್ಟಿಂಗ್ ಯಂತ್ರದ ಕಾರ್ಯಾಚರಣೆಯ ಸಂದರ್ಭದಲ್ಲಿ ನಡೆದಿದೆ. ಇಪ್ಪತ್ತೆರಡು ಲ್ಯಾಡಲ್‌ಗಳ ಕಾರ್ಯಾಚರಣೆ ಮುಗಿದ ನಂತರ, ಮುಂದಿನ ಲ್ಯಾಡಲ್ ಅನ್ನು ಸೇರಿಸುವಾಗ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಸಮಯದಲ್ಲಿ, ಲ್ಯಾಡಲ್‌ನ ಮೇಲ್ಭಾಗದಿಂದ ಹಠಾತ್ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬಿಸಿ ಲೋಹ ಚೆಲ್ಲಿದೆ ಮತ್ತು ಕ್ರೇನ್‌ಗೂ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಲೋಹದ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸ್ಲೈಡ್ ಗೇಟ್ ವ್ಯವಸ್ಥೆಯಲ್ಲಿನ ವೈಫಲ್ಯವು ಈ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ತನಿಖೆ ನಡೆಯುತ್ತಿದ್ದು, ದುರಂತಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚುವ ಪ್ರಯತ್ನ ಸಾಗಿದೆ. ಕಾರ್ಮಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 09, 2026 09:14 AM
Follow Us