ಬಳ್ಳಾರಿಯ ರಾಮಗಡ ಅರಣ್ಯ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಪ್ರಸ್ತಾವನೆ

ಬಳ್ಳಾರಿಯ ರಾಮಗಡ ಅರಣ್ಯ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಪ್ರಸ್ತಾವನೆ

ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ವಿವೇಕ ಬಿರಾದಾರ

Updated on: Jun 24, 2024 | 9:26 AM

ಬಳ್ಳಾರಿ ಜಿಲ್ಲೆಯ ಸಂಡೂರಿನ ರಾಮಗಡ ಅರಣ್ಯ ವ್ಯಾಪ್ತಿಯ 150 ಎಕರೆಯಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಭಾರತೀಯ ಉಕ್ಕು ಪ್ರಾಧಿಕಾರ ಅಡಿಯ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಕಂಪನಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ಬಳ್ಳಾರಿ, ಜೂನ್​ 24: ಸಂಡೂರು (Sandur) ತಾಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಬೆಟ್ಟ 401.57 ಹೆಕ್ಟರ್​​ ಅರಣ್ಯ ಭೂಮಿಯಲ್ಲಿ (Forest Aria) ಕಬ್ಬಿಣದ ಅದಿರು ಗಣಿಗಾರಿಕೆ ವಿಚಾರ ಸದ್ಯ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದು, ಜನಪ್ರತಿನಿಧಿಗಳ ವಾಗ್ಯುದ್ಧಕ್ಕೆ ಕಾರಣವಾಗಿದೆ. ಈ ಮಧ್ಯೆ ಇದೇ ತಾಲೂಕಿನ ರಾಮಗಡ ಅರಣ್ಯ ವ್ಯಾಪ್ತಿಯ (Ramgad forest range) 150 ಎಕರೆಯಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಭಾರತೀಯ ಉಕ್ಕು ಪ್ರಾಧಿಕಾರ ಅಡಿಯ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VSLV) ಕಂಪನಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

ಸಂಡೂರಿನ ರಾಮಗಡ ವ್ಯಾಪ್ತಿಯ 150 ಎಕರೆ ಅರಣ್ಯ ಪ್ರದೇಶದಲ್ಲಿ ಗಣಿ ವಿಸ್ತರಣೆಗೆ ಅನುಮತಿ ನೀಡುವಂತೆ 2023 ರಲ್ಲಿ ವಿಎಸ್​ಎಲ್​ವಿ ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಅಡಿ ಪ್ರಸ್ತಾವನೆ ಸಲ್ಲಿಸಿದೆ.

ವಿಎಸ್​ಎಲ್​ವಿ ಪ್ರಸ್ತಾವನೆ ಬಳಿಕ 150 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆ ಸರ್ವೇ ಮಾಡಿದ್ದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಒಂದು ವೇಳೆ ಅನುಮತಿ ದೊರೆತರೆ ರಾಮಗಡ ಅರಣ್ಯದಲ್ಲಿನ 29,000 ಮರಗಳು ನಾಶವಾಗುತ್ತವೆ. 500 ಆಲದ ಮರ, 240 ಅರಳಿ, 220 ಹೊನ್ನೆಮರ, 1000 ಸಾಗವಾನಿ, 3000 ದಿಂಡಾಲು ಮರ,500 ಕ್ಕೂ ಶ್ರೀಗಂಧ ಔಷಧೀಯ ಗುಣವುಳ್ಳ ಸಸ್ಯಗಳ ಮಾರಣ ಹೋಮವಾಗಲಿದೆ.

ಅರಣ್ಯ ನಾಶದಿಂದ ಬಳ್ಳಾರಿ ಜಿಲ್ಲೆ ಮತ್ತಷ್ಟು ಕಲುಷಿತಗೊಳ್ಳಲಿದೆ. ಗಣಿಗಾರಿಕೆಯಿಂದ ಭೂ ಸವಕಳಿ, ವನ್ಯ ಸಂಕುಲಕ್ಕೆ ಹಾನಿ, ನೀರಿನ ಅಭದ್ರತೆ ಉಂಟಾಗುತ್ತದೆ. ಕರಡಿ, ಚಿಂಕೆ, ನವಿಲು, ಚಿರತೆ ವನ್ಯ ಪ್ರಾಣಿಗಳಿಗೆ ಸಂಕಷ್ಟ ಎದುರಾಗಲಿದೆ. ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು ಅಂತ ಸಂಡೂರಿನ ಜನತೆ ಮತ್ತು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೇಂದ್ರದ ಒಪ್ಪಿಗೆ ನಂತರವೂ ಬಳ್ಳಾರಿ ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ ರಾಜ್ಯ ತಡೆ, ಹೆಚ್​​​ಡಿಕೆಗೆ ಹಿನ್ನಡೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ