ವಿಧಾನಮಂಡಲ ಅಧಿವೇಶನ ಪುನರಾರಂಭ; ಸಿಎಂ ವಿರುದ್ಧ ಹೋರಾಟ ತೀವ್ರಗೊಳಿಸಲು ಪ್ಲ್ಯಾನ್
Karnataka Legislative Assembly Session Live: ಇಂದು ಮತ್ತೆ ವಿಧಾನಮಂಡಲ ಅಧಿವೇಶನ ಪುನರಾರಂಭಗೊಂಡಿದ್ದು ಇಂದು ಸಿಎಂ ವಿರುದ್ಧ ಹೋರಾಟ ತೀವ್ರಗೊಳಿಸಲು ವಿರೋಧ ಪಕ್ಷಗಳು ಪ್ಲ್ಯಾನ್ ಮಾಡಿವೆ. ವಾಲ್ಮೀಕಿ ನಿಗಮದ ಹಗರಣ ಆಯ್ತು. ಈಗ ‘ಮುಡಾ’ ಹಗರಣದ ಬಗ್ಗೆ ತೀವ್ರ ಚರ್ಚೆ ನಡೆಯುವ ಸಾಧ್ಯತೆ ಇದೆ.
ಬೆಂಗಳೂರು, ಜುಲೈ.22: ಎರಡು ದಿನಗಳ ವಿರಾಮದ ಬಳಿಕ ರಾಜ್ಯ ವಿಧಾನಮಂಡಲ ಇಂದು ಮತ್ತೆ ಪುನರಾರಂಭಗೊಂಡಿದೆ. ಇದೇ ಜುಲೈ 15ರಿಂದ ಆರಂಭವಾಗಿದ್ದ ವಿಧಾನಸಭೆ ಕಲಾಪವನ್ನ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣವೇ ನುಂಗಿ ಹಾಕಿತ್ತು. ತನಿಖೆಯನ್ನ ಸಿಬಿಐಗೆ ಒಪ್ಪಿಸಿ, ನೈತಿಕತೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ಬೇಕೆಂದು ಬಿಜೆಪಿ, ಜೆಡಿಎಸ್ ಶಾಸಕರು ಸದನದ ಒಳಗೆ, ಹೊರಗೆ ಪ್ರತಿಭಟನೆ ನಡೆಸಿದ್ದರು. ಅಲ್ದೇ, ಸದನದ ಬಾವಿಗಿಳಿದು ಹೋರಾಟ ನಡೆಸಿದ್ದರು. ನಿಮ್ಮ ಸುಳ್ಳು ಆರೋಪಕ್ಕೆ ಬಗ್ಗಲ್ಲ ಅಂತಾ ಸಿಎಂ ಸದನದಲ್ಲೇ ತೋಳ್ ತಟ್ಟಿ ತಿರುಗೇಟು ನೀಡಿದ್ದರು. ಇದೀಗ ಎರಡು ದಿನಗಳ ಬ್ರೇಕ್ ಬಳಿಕ ಇಂದು ಮತ್ತೆ ವಿಧಾನಮಂಡಲ ಪುನರಾರಂಭಗೊಂಡಿದೆ.
ಕಳೆದ ಚರ್ಚೆಯಲ್ಲಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣ ಸದನದೊಳಗೆ ದೊಡ್ಡ ಹೈಡ್ರಾಮವೇ ಸೃಷ್ಟಿಸಿತ್ತು. ಒಂದು ಹಂತದಲ್ಲಿ ತೀರಾ ವೈಯಕ್ತಿಕ ಮಟ್ಟಕ್ಕಿಳಿದಿದ್ದ ನಾಯಕರು ದೊಡ್ಡ ವಾಗ್ವಾದವನ್ನೇ ನಡೆಸಿದ್ದರು. ಇನ್ನು ಮುಡಾ ಅಕ್ರಮವೂ ಸದನದಲ್ಲಿಂದು ಕಿಚ್ಚು ಹಚ್ಚುವ ಸಾಧ್ಯತೆ ಇದೆ. ಮುಡಾ ಹಗರಣದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಆರೋಪ ಕೇಳಿಬಂದಿದೆ. ಸಿಎಂ ಸಿದ್ದರಾಮಯ್ಯ ಅವ್ರ ಪತ್ನಿ ಪಾರ್ವತಿ, ಬಾಮೈದಾ ಮಲ್ಲಿಕಾರ್ಜುನ ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿದೆ. ಆದ್ದರಿಂದ ಮುಡಾ ಸೈಟ್ ಹಂಚಿಕೆ ಹಗರಣವನ್ನೇ ಆದ್ಯತೆಯ ಹೋರಾಟವಾಗಿ ತೆಗೆದುಕೊಳ್ಳಲು ಬಿಜೆಪಿ, ಜೆಡಿಎಸ್ ಶಾಸಕರು ಮುಂದಾಗಿದ್ದಾರೆ. ಇನ್ನು ಮಳೆ ಅವಾಂತರ, ನೆರೆ ಹಾವಳಿ ಇಂದು ಸದನದಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ