ಯುವನಿಧಿ; ಹಣ ಪೋಲು ಮಾಡುತ್ತಿಲ್ಲ, ಜನರಿಂದ ಸಂಗ್ರಹವಾದ ತೆರಿಗೆ ಹಣ ಜನರಿಗೆ ನೀಡುತ್ತಿದ್ದೇವೆ: ಡಾ ಶರಣಪ್ರಕಾಶ್ ಪಾಟೀಲ್, ಸಚಿವ

ಯುವನಿಧಿ; ಹಣ ಪೋಲು ಮಾಡುತ್ತಿಲ್ಲ, ಜನರಿಂದ ಸಂಗ್ರಹವಾದ ತೆರಿಗೆ ಹಣ ಜನರಿಗೆ ನೀಡುತ್ತಿದ್ದೇವೆ: ಡಾ ಶರಣಪ್ರಕಾಶ್ ಪಾಟೀಲ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 12, 2024 | 11:59 AM

ಪದವಿ ಪಡೆದು 6 ತಿಂಗಳಾಗಿರುವ ಎಲ್ಲ ಅರ್ಹ ಯುವಕರಿಗೆ ಇವತ್ತಿನಿಂದಲೇ ಡಿಬಿಟಿ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಹಣ ಟ್ರಾನ್ಸ್ ಫರ್ ಮಾಡಲಾಗುತ್ತದೆ ಮತ್ತು ಮೊದಲ ಹಂತದಲ್ಲಿ ಸುಮಾರು 5,000 ಪದವೀಧರರು ಯೋಜನೆಯ ಲಾಭಾರ್ಥಿಗಳಾಗಲಿದ್ದಾರೆ ಎಂದು ಡಾ ಶರಣಪ್ರಕಾಶ್ ಪಾಟೀಲ್ ಹೇಳಿದರು. ಇದು ನಿಲ್ಲದ ಪ್ರಕ್ರಿಯೆ, ಪ್ರತಿದಿನ ಹಣ ವರ್ಗಾವಣೆ ಅಗುತ್ತಿರುತ್ತದೆ ಎಂದು ಸಚಿವ ಹೇಳಿದರು.

ಶಿವಮೊಗ್ಗ: ಕರ್ನಾಟಕ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಚಾಲನೆಗೆ ಕ್ಷಣಗಣನೆ ಆರಂಭವಾಗಿದ್ದು ಕಾರ್ಯಕ್ರಮದ ಉಸ್ತುವಾರಿವಹಿಸಿಕೊಂಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ (Dr Sharan Prakash Patil) ಟಿವಿ9 ಶಿವಮೊಗ್ಗ ವರದಿಗಾರನಿಗೆ ಯೋಜನೆ ಮತ್ತು ಕಾರ್ಯಕ್ರಮದ ಬಗ್ಗೆ ವಿವರಗಳನ್ನು ನೀಡಿದರು. ಕರ್ನಾಟಕ ಸರ್ಕಾರ (state government) ರಾಜ್ಯದ ಜನರಿಗೆ ನೀಡಿದ 5ನ ಗ್ಯಾರಂಟಿಯನ್ನು (5th guarantee) ಇವತ್ತು ಜಾರಿಗೆ ತರುತ್ತಿದೆ, ಕಾರ್ಯಕ್ರಮಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ, ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಪಾಟೀಲ್ ಹೇಳಿದರು. ತಮ್ಮ ಸರ್ಕಾರ ನುಡಿದಂತೆ ನಡೆದಿದೆ, ನಿರುದ್ಯೋಗಿ ಪದವೀಧರರಿಗೆ ಯುವನಿಧಿ ಯೋಜನೆ ಅಡಿ ಧನಸಹಾಯ ಮಾಡುವ ಜೊತೆಗೆ ಮುಂಬರುವ ದಿನಗಳಲ್ಲಿ ಅವರ ಕೌಶಲ್ಯ ತರಬೇತಿ ಒದಗಿಸಿ ನೌಕರಿ ಕೊಡುವ ಕೆಲಸ ಸಹ ತಮ್ಮ ಸರ್ಕಾರ ಮಾಡುತ್ತದೆ ಎಂದರು.

ಬಿಜೆಪಿ ಆರೋಪಿಸುತ್ತಿರುವ ಹಾಗೆ ತಮ್ಮ ಸರ್ಕಾರ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿಲ್ಲ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅಂತ ಶರಣರು ಹೇಳಿರುವ ಹಾಗೆ ಜನರ ಹಣವನ್ನು ಜನರಿಗಾಗಿ ವ್ಯಯಿಸುವ ಕೆಲಸ ಮಾಡುತ್ತ್ತಿದೆ ಎಂದು ಸಚಿವ ಹೇಳಿದರು. ನಾಡಿನ ಬಡಜನ ಮತ್ತು ರೈತರ ಬಗ್ಗೆ ಸರ್ಕಾರಕ್ಕಿರುವ ಕಾಳಜಿಯನ್ನು ನಾವು ಪ್ರದರ್ಶಿಸುತ್ತಿದ್ದೇವೆ ಹಿಂದಿನ ಬಿಜೆಪಿ ಸರ್ಕಾರ ಬಡವರು ಮತ್ತು ರೈತರ ಬಗ್ಗೆ ಅಸಡ್ಡೆ ಹಾಗೂ ನಿರ್ಲಕ್ಷ್ಯ ಧೋರಣೆ ತಳೆದಿತ್ತು ಎಂದು ಡಾ ಪಾಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 12, 2024 11:49 AM