ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿ ಯಾವ ಕಾಲದ್ದು ಗೊತ್ತೇ? ಬಯಲಾಯ್ತು ರಹಸ್ಯ
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸುಮಾರು 300 ವರ್ಷಗಳಿಗಿಂತಲೂ ಹಳೆಯ ಚಿನ್ನದ ಆಭರಣಗಳು ಪತ್ತೆಯಾಗಿವೆ. ಈ ನಿಧಿಯಲ್ಲಿ ಕಂಡುಬಂದಿರುವ ದೊಡ್ಡ ಗಾತ್ರದ ಆಭರಣಗಳು ಹಾಗೂ ಸೂಕ್ಷ್ಮ ಕೆತ್ತನೆಗಳು ಅಂದಿನ ಶ್ರೀಮಂತಿಕೆಯ ಮತ್ತು ಉನ್ನತ ಕರಕುಶಲತೆಯ ಪ್ರತೀಕವಾಗಿವೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಶೋಧ ಪ್ರಾಚೀನ ಇತಿಹಾಸದ ಕುರಿತು ಬೆಳಕು ಚೆಲ್ಲಲಿದೆ.
ಗದಗ, ಜನವರಿ 14: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿರುವ ನಿಧಿ ಸುಮಾರು 300 ವರ್ಷಗಳಿಗಿಂತಲೂ ಹಳೆಯದ್ದು ಎಂಬುದು ಗೊತ್ತಾಗಿದೆ. ಜಿಲ್ಲಾಧಿಕಾರಿಗಳ ಹೇಳಿಕೆಗಳ ಪ್ರಕಾರ, ಪತ್ತೆಯಾದ ಆಭರಣಗಳು 300 ವರ್ಷಗಳಿಗೂ ಹೆಚ್ಚು ಹಳೆಯದಾಗಿದ್ದು, ಅಂದಿನ ಕಾಲದ ಮೂರು-ನಾಲ್ಕು ರಾಜಮನೆತನಗಳ ಆಳ್ವಿಕೆಗೆ ಸಂಬಂಧಿಸಿರಬಹುದು. ಪತ್ತೆಯಾದ ಆಭರಣಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಇವುಗಳನ್ನು ಯಾರೋ ದಷ್ಟಪುಷ್ಟವಾಗಿರುವ ಶ್ರೀಮಂತ ವ್ಯಕ್ತಿಗಳು ಧರಿಸಿರಬೇಕು ಎಂದು ಜಿಲ್ಲಾಧಿಕಾರಿಗಳು ಅಂದಾಜಿಸಿದ್ದಾರೆ. ಈ ನಿಧಿ ಯಾರಿಗೆ ಸೇರಿತ್ತು ಎಂಬುದರ ಕುರಿತು ವರದಿ ಬರಲು ಇನ್ನೂ ಮೂರು ದಿನಗಳು ಬೇಕಾಗಬಹುದು. ವಿಶೇಷವಾಗಿ, ಆಭರಣಗಳ ಮೇಲಿನ ವರ್ಕ್‍ಮನ್‍ಶಿಪ್ (ಕರಕುಶಲತೆ) ಗಮನ ಸೆಳೆದಿದೆ.
