Nirani Vs Yatnal; ಜನತಾ ದಳ ಕಾರ್ಯದರ್ಶಿಯಾಗಿದ್ದಾಗ ಬಸನಗೌಡ ಯತ್ನಾಳ್ ಮಸೀದಿಗಳಿಗೆ ತೆರಳಿ ನಮಾಜ್ ಮಾಡುತ್ತಿದ್ದರು: ಮುರುಗೇಶ್ ನಿರಾಣಿ
ಯತ್ನಾಳ್ ಈಗ ಮಾಡುತ್ತಿರುವ ಡ್ರಾಮಾ ಬಹಳ ಹಿಂದೆಯೇ ಮಾಡಿದ್ದರು ಎಂದು ನಿರಾಣಿ ಹೇಳಿದರು.
ವಿಜಯಪುರ: ಮಾಜಿ ಸಚಿವ ಮುರುಗೇಶ್ ನಿರಾಣಿ ವಿಜಯಪುರದಲ್ಲೇ ತಮ್ಮ ಬದ್ಧ ವೈರಿ ಮತ್ತು ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅನಿರ್ಬಂಧಿತ ವಾಗ್ದಾಳಿ ನಡೆಸಿದರು. ತಮ್ಮ ಮಾತುಗಳಲ್ಲಿ ಅವರು ಯತ್ನಾಳ್ ರಂತೆ ಸೌಜನ್ಯತೆಯ ಎಲ್ಲೆ ಮೀರದಿರುವುದು ಉಲ್ಲೇಖನೀಯ ಅಂಶ. ನಿರಾಣಿ ಅಸಂಸದೀಯ ಪದಗಳನ್ನು ಬಳಸುವ ಗೋಜಿಗೆ ಹೋಗದೆ ಯತ್ನಾಳ್ ಜನ್ಮ ಜಾಲಾಡಿದರು. ದಿವಂಗತ ಅಟಲ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗ ಮಂಜುನಾಥ ಕೊಣ್ಣೂರ, ಹೆಚ್ ಟಿ ಸಾಂಗ್ಲಿಯಾನಾ ಮತ್ತು ಮಾರ್ಗರೆಟ್ ಅಳ್ವಾ ಅವರೊಂದಿಗೆ ಯತ್ನಾಳ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಒಂಟಿಕಾಲಲ್ಲಿ ನಿಂತಿದ್ದರು. ಆಗ ಕೇಂದ್ರದಲ್ಲಿ ಸಚಿವರಾಗಿದ್ದ ದಿವಂಗತ ಅನಂತ ಕುಮಾರ್ ಅವರು ಯತ್ನಾಳ್ ಮನವೊಲಿಸುವಲ್ಲಿ ಸಫಲರಾಗಿದ್ದರು ಎಂದು ನಿರಾಣಿ ಹೇಳಿದರು. ಮುಂದೆ ಅವರು ಪಕ್ಷ ತೊರೆದು ಜನತಾ ದಳ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮಸೀದ, ದರ್ಗಾಗಳಿಗೆ ಹೋಗಿ ನಮಾಜ್ ಮಾಡಿದ್ದು, ಬಿಜೆಪಿ ನಾಯಕರನ್ನು ಕೆಟ್ಟ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದು ಎಲ್ಲರಿಗೂ ಗೊತ್ತಿದೆ. ಯತ್ನಾಳ್ ಈಗ ಮಾಡುತ್ತಿರುವ ಡ್ರಾಮಾ ಬಹಳ ಹಿಂದೆಯೇ ಮಾಡಿದ್ದರು ಎಂದು ನಿರಾಣಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ