ಕಾಂಗ್ರೆಸ್ ತಾನಾಗಿಯೇ ಅವಸಾನದ ಹಾದಿ ಹಿಡಿದಿರುವಾಗ ಶಿವಕುಮಾರರನ್ನು ಟಾರ್ಗೆಟ್ ಮಾಡುವ ಅಗತ್ಯವಿಲ್ಲ: ಸಿಟಿ ರವಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 11, 2022 | 8:15 PM

ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಬ್ ನಲ್ಲಿ ಜನ ಅದನ್ನು ತಿರಸ್ಕರಿಸಿ ಆಪ್ ಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದರು. ಹೀಗೆ ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿರುವಾಗ ಶಿವಕುಮಾರ ಅವರನ್ನು ಟಾರ್ಗೆಟ್ ಮಾಡಿದರೆ ನಮಗೆ ಏನು ಪ್ರಯೋಜನ?

ಚಿಕ್ಕಮಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರನ್ನು ಬಿಜೆಪಿ ಟಾರ್ಗೆಟ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಹೇಳಿದರು. ಬುಧವಾರದದಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ರವಿಯವರು ಕಾಂಗ್ರೆಸ್ ಪಕ್ಷ ತಾನಾಗಿಯೇ ನಿರ್ನಾಮದ ಹಾದಿಯಲ್ಲಿರುವಾಗ ಶಿವಕುಮಾರ ಅವರನ್ನು ಟಾರ್ಗೆಟ್ ಮಾಡಿ ಏನು ಪ್ರಯೋಜನ ಎಂದು ಹೇಳಿದರು. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮೈ ಲಡಕೀ ಹೂಂ ಲಡ್ ಸಕ್ತೀ ಹೂಂ ಎಂದು ಹೇಳಿದ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಪಾಡು ಆಗಿದ್ದೇನು? ಸ್ಪರ್ಧಿಸಿದ್ದ 399 ಕ್ಷೇತ್ರಗಳ ಪೈಕಿ 387 ರಲ್ಲಿ ಠೇವಣಿ ಕಳೆದುಕೊಂಡರು, ಗೆದ್ದಿದ್ದು 2 ಕ್ಷೇತ್ರಗಳು ಮಾತ್ರ ಎಂದು ರವಿ ಹೇಳಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಬ್ ನಲ್ಲಿ ಜನ ಅದನ್ನು ತಿರಸ್ಕರಿಸಿ ಆಪ್ ಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದರು. ಹೀಗೆ ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿರುವಾಗ ಶಿವಕುಮಾರ ಅವರನ್ನು ಟಾರ್ಗೆಟ್ ಮಾಡಿದರೆ ನಮಗೆ ಏನು ಪ್ರಯೋಜನ? ಶಿವಕುಮಾರ ಅವರ ವೈಯಕ್ತಿಕ ಸಾಮರ್ಥ್ಯವನ್ನು ತಾವು ಪ್ರಶ್ನಿಸುವುದಿಲ್ಲ ಎಂದ ರವಿ ರಾಜಕೀಯವಾಗಿ ಅವರು ತಮ್ಮ ಸಾಮರ್ಥ್ಯವನ್ನು ಕನಕಪುರವೊಂದನ್ನು ಬಿಟ್ಟು ಬೇರೆಲ್ಲೂ ತೋರಿಸಲಾಗಿಲ್ಲ ಅಂದರು.

ಶಿವಕುಮಾರ ಅವರು ಯಾವುದೇ ತಪ್ಪು ಮಾಡಿಲ್ಲ ಅಂತಾದರೆ ಆತಂಕಪಡುವ ಅವಶ್ಯಕತೆಯಿಲ್ಲ. ಆದರೆ ನಮ್ಮಲ್ಲೊಂದು ಗಾದೆ ಮಾತಿದೆ, ಉಪ್ಪು ತಿಂದವನನು ನೀರು ಕುಡಿಯಬೇಕು ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇ ಬೇಕು ಅಂತ. ಶಿವಕುಮಾರ ಅವರು ರಾಜಕಾರಣಿ ಅಗಿರುವೆನೆಂಬ ಕಾರಣಕ್ಕೆ ಅದನ್ನು ಗುರಾಣಿಯಾಗಿ ಉಪಯೋಗಿಸುವುದು ಸರಿಯಲ್ಲ, ತಪ್ಪು ಮಾಡದೆ ಜೈಲಿಗೆ ಹೋದವರಿಗೆ ಅದೊಂದು ಶಕ್ತಿಯಾಗಿ ಪರಿಣಮಿಸುತ್ತದೆ, ಅದರೆ ತಪ್ಪು ಮಾಡಿ ಜೈಲಿಗೆ ಹೋದವನ ರಾಜಕೀಯ ಬದುಕು ಅಂತ್ಯಗೊಳ್ಳುತ್ತದೆ ಎಂದು ರವಿ ಹೇಳಿದರು.

ಇದನ್ನೂ ಓದಿ:  ಸಚಿವ ಅಶ್ವತ್ಥ್ ನಾರಾಯಣ-ಎಂ.ಬಿ.ಪಾಟೀಲ್ ಭೇಟಿ ವಿಚಾರ; ಡಿಕೆ.ಶಿವಕುಮಾರ್‌ ಮೇಲೆ ಹರಿ ಹಾಯ್ದ ನಟಿ, ಮಾಜಿ ಸಂಸದೆ ರಮ್ಯಾ