VIDEO: ದಿಗ್ವೇಶ್ ರಾಥಿ ಮಹಾ ಎಡವಟ್ಟು… ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ!

Updated on: May 28, 2025 | 7:43 AM

IPL 2025 RCB vs LSG: ಇಂಡಿಯನ್ ಪ್ರೀಮಿಯರ್ ಲೀಗ್​ನ 70ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 227 ರನ್ ಕಲೆಹಾಕಿತು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.4 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್​ಸಿಬಿ 6 ವಿಕೆಟ್​ಗಳ ಜಯ ಸಾಧಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ ಕೊನೆಯ ಲೀಗ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಹೋರಾಟದಲ್ಲಿ ಕೊನೆಗೂ ಗೆದ್ದು ಬೀಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಲಕ್ನೋ ಏಕನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ಪರ ಜಿತೇಶ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅತ್ತ ಜಿತೇಶ್ ವಿಕೆಟ್​ಗಾಗಿ ಎಲ್​ಎಸ್​ಜಿ ಬೌಲರ್​ಗಳು ಪರದಾಡಿದ್ದರು. ಇದರ ನಡುವೆ ದಿಗ್ವೇಶ್ ರಾಥಿ 17ನೇ ಓವರ್​ನ ಕೊನೆಯ ಎಸೆತದಲ್ಲಿ ಜಿತೇಶ್ ಶರ್ಮಾ ಅವರನ್ನು ಮಂಕಡ್ ರನೌಟ್ ಮಾಡಿದ್ದರು. ಅಲ್ಲದೆ ಔಟ್​ಗಾಗಿ ಮೇಲ್ಮನವಿ ಸಲ್ಲಿಸಿದ್ದರು. ಈ ಮಂಕಡ್ ರನೌಟ್ ಅನ್ನು ಪರಿಶೀಲಿಸಿದ ಮೂರನೇ ಅಂಪೈರ್ ನಾಟೌಟ್ ನೀಡಿದ್ದರು.

ಅತ್ತ ಜಿತೇಶ್ ಶರ್ಮಾ ಕ್ರೀಸ್​ನಿಂದ ಹೊರಗಿದ್ದರೂ, ಮೂರನೇ ಅಂಪೈರ್ ನಾಟೌಟ್ ನೀಡಲು ಮುಖ್ಯ ಕಾರಣ ಅದು ದಿಗ್ವೇಶ್ ರಾಥಿ ಮಾಡಿದ ದೊಡ್ಡ ಎಡವಟ್ಟು. ಅಂದರೆ ದಿಗ್ವೇಶ್ ತನ್ನ ಬೌಲಿಂಗ್ ಆಕ್ಷನ್ ಪೂರ್ಣಗೊಳಿಸಿದ ಬಳಿಕ ಬೇಲ್ಸ್ ಎಗರಿಸಿದ್ದರು.

ಮಂಕಡ್ ರನೌಟ್ ನಿಯಮದ ಪ್ರಕಾರ, ಬೌಲರ್ ತನ್ನ ಬೌಲಿಂಗ್ ಆಕ್ಷನ್ ಪೂರ್ಣಗೊಳಿಸಿ ಪಾಪಿಂಗ್ ಕ್ರೀಸ್ ದಾಟಿದ ನಂತರ ನಾನ್-ಸ್ಟ್ರೈಕರ್​ನ ರನೌಟ್ ಮಾಡುವಂತಿಲ್ಲ. ಇತ್ತ ದಿಗ್ವೇಶ್ ರಾಥಿ ತನ್ನ ಮುಂದಿನ ಪಾದವನ್ನು ಕ್ರೀಸ್​ ಮೇಲಿಟ್ಟು ಬೌಲಿಂಗ್ ಆ್ಯಕ್ಷನ್ ತೋರಿಸಿ, ಹಿಂತಿರುಗಿ ರನೌಟ್ ಮಾಡಿದ್ದರು. ಹೀಗಾಗಿಯೇ ಮೂರನೇ ಅಂಪೈರ್ ಅದನ್ನು ನಾಟೌಟ್ ಎಂದು ಪರಿಗಣಿಸಿದ್ದಾರೆ.

ಅದರಂತೆ ಜೀವದಾನ ಪಡೆದ ಜಿತೇಶ ಶರ್ಮಾ ಅಂತಿಮವಾಗಿ 33 ಎಸೆತಗಳಲ್ಲಿ ಅಜೇಯ 85 ರನ್ ಬಾರಿಸಿ ಆರ್​ಸಿಬಿ ತಂಡಕ್ಕೆ 6 ವಿಕೆಟ್​ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ರಾಯಲ್ ಪಡೆ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.