IND vs WI: 150 ರನ್ಗಳ ಗಡಿ ದಾಟಿ ಡಬ್ಲ್ಯುಟಿಸಿಯಲ್ಲಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
Yashasvi Jaiswal century: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಭಾರತ 318/2 ಗಳಿಸಿದೆ. ಯಶಸ್ವಿ ಜೈಸ್ವಾಲ್ 173* ರನ್ ಗಳಿಸಿ ಅಜೇಯರಾಗಿದ್ದು, ಇದು ಅವರ 7ನೇ ಟೆಸ್ಟ್ ಶತಕ. ಇದರೊಂದಿಗೆ ಜೈಸ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 150+ ರನ್ ಗಳಿಸಿದವರಲ್ಲಿ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ, ಭಾರತೀಯ ಆರಂಭಿಕರಲ್ಲಿ 150+ ಇನ್ನಿಂಗ್ಸ್‌ಗಳ ದಾಖಲೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಕೇವಲ ಎರಡು ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿದೆ. ಮೊದಲ ದಿನದಾಟದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅದ್ಭುತ ಶತಕ ಬಾರಿಸಿದ್ದು ಮಾತ್ರವಲ್ಲದೆ ದಿನದ ಅಂತ್ಯದಲ್ಲಿ 173 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ್ದಾರೆ. ಇದು ಜೈಸ್ವಾಲ್ ಅವರ ಏಳನೇ ಟೆಸ್ಟ್ ಶತಕವಾಗಿದ್ದು, ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ 150 ಕ್ಕೂ ಹೆಚ್ಚು ರನ್ ಕಲೆಹಾಕಿರುವ ಯಶಸ್ವಿ ಜೈಸ್ವಾಲ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಇನ್ನಿಂಗ್ಸ್‌ನಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದ್ದಾರೆ. ಈ ವಿಚಾರದಲ್ಲಿ ಇದುವರೆಗೆ ತಲಾ 5 ಬಾರಿ 150 ಕ್ಕೂ ಹೆಚ್ಚು ರನ್ ಕಲೆಹಾಕಿರುವ ಕೇನ್ ವಿಲಿಯಮ್ಸನ್ ಮತ್ತು ಮಾರ್ನಸ್ ಲಬುಶೇನ್ ಜಂಟಿಯಾಗಿ ಎರಡನೇ ಸ್ಥಾನದ್ದಾರೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇದುವರೆಗೆ 8 ಬಾರಿ ಇನ್ನಿಂಗ್ಸ್‌ನಲ್ಲಿ 150 ಕ್ಕೂ ಹೆಚ್ಚು ರನ್ ದಾಖಲಿಸಿರುವ ಜೋ ರೂಟ್ ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇದರ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅತಿ ಹೆಚ್ಚು ಬಾರಿ 150+ ಇನ್ನಿಂಗ್ಸ್‌ಗಳನ್ನು ಆಡಿದ ದಾಖಲೆಯನ್ನು ವೀರೇಂದ್ರ ಸೆಹ್ವಾಗ್ ಹೊಂದಿದ್ದಾರೆ, ಈ ಸಾಧನೆಯನ್ನು 14 ಬಾರಿ ಸಾಧಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಈಗ ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದ್ದಾರೆ. ಸುನಿಲ್ ಗವಾಸ್ಕರ್ ತಮ್ಮ ವೃತ್ತಿಜೀವನದಲ್ಲಿ 11 ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅಧಿಕ ಬಾರಿ 150+ ಇನ್ನಿಂಗ್ಸ್‌ಗಳನ್ನು ಆಡಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

