IND vs WI: ಕೊನೆಗೂ ಸತತ 6 ಸೋಲುಗಳ ಸರಣಿ ಮುರಿದ ಶುಭ್ಮನ್ ಗಿಲ್; ವಿಡಿಯೋ ನೋಡಿ
Shubman Gill's First Test Toss Win: ಭಾರತ-ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್‌ನಲ್ಲಿ ಶುಭ್ಮನ್ ಗಿಲ್ ಟೆಸ್ಟ್ ನಾಯಕನಾಗಿ ಮೊದಲ ಬಾರಿಗೆ ಟಾಸ್ ಗೆದ್ದಿದ್ದಾರೆ. ಸತತ 6 ಪಂದ್ಯಗಳಲ್ಲಿ ಟಾಸ್ ಸೋತಿದ್ದ ಗಿಲ್, ದೆಹಲಿ ಟೆಸ್ಟ್‌ನಲ್ಲಿ ಈ ಸರಣಿಯನ್ನು ಮುರಿದರು. ಟಾಸ್ ಸೋಲಿನ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದ ಗಿಲ್ ನಾಯಕತ್ವದಲ್ಲಿ ಭಾರತ 3 ಗೆಲುವು, 2 ಸೋಲು, 1 ಡ್ರಾ ಕಂಡಿದೆ. ಇದು ಅವರ ಏಳನೇ ಟೆಸ್ಟ್ ಪಂದ್ಯ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ನಾಯಕ ಶುಭ್ಮನ್ ಗಿಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದು ಟೆಸ್ಟ್ ನಾಯಕನಾಗಿ ಶುಭ್ಮನ್ ಗಿಲ್ಗೆ ಮೊದಲ ಟಾಸ್ ಗೆಲುವಾಗಿದೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, ಶುಭ್ಮನ್ ಗಿಲ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಲಾಯಿತು. ಆದರೆ ನಾಯಕನಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್‌ಗಳ ನಾಯಕತ್ವ ವಹಿಸಿದ್ದ ಗಿಲ್, ಈ ಪಂದ್ಯಗಳಲ್ಲಿ ಒಂದರಲ್ಲೂ ಟಾಸ್ ಗೆದ್ದಿರಲಿಲ್ಲ. ಇಂಗ್ಲೆಂಡ್ ಪ್ರವಾಸದ ನಂತರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿಯೂ ಗಿಲ್ ಟಾಸ್ ಸೋತಿದ್ದರು. ಆದರೆ ದೆಹಲಿಯಲ್ಲಿ ಇಂದಿನಿಂದ ಆರಂಭವಾಗಿರುವ ಎರಡನೇ ಟೆಸ್ಟ್‌ನಲ್ಲಿ ಟಾಸ್ ಗೆಲ್ಲುವ ಮೂಲಕ ಗಿಲ್, ಸತತ 6 ಪಂದ್ಯಗಳ ಟಾಸ್ ಸೋಲಿನ ಸರಣಿಯನ್ನು ಮುರಿದಿದ್ದಾರೆ.
ಆದಾಗ್ಯೂ ಮೊದಲ 6 ಪಂದ್ಯಗಳಲ್ಲಿ ಟಾಸ್ ಸೋತಿದ್ದ ಗಿಲ್, ನಾಯಕನಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಪಡೆದ ಬಳಿಕ ಸತತ ಪಂದ್ಯಗಳಲ್ಲಿ ಅಧಿಕ ಬಾರಿ ಟಾಸ್ ಸೋತ ನಾಯಕರ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಶುಭ್ಮನ್ ಗಿಲ್ ಹಾಗೂ ನ್ಯೂಜಿಲೆಂಡ್‌ನ ಟಾಮ್ ಲೇಥಮ್ ತಲಾ ಆರು ಪಂದ್ಯಗಳಲ್ಲಿ ಸತತವಾಗಿ ಟಾಸ್ ಸೋತಿದ್ದಾರೆ. ಈ ವಿಚಾರದಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಬೆವನ್ ಕಾಂಗ್ಡನ್ ಸತತವಾಗಿ ಮೊದಲು ಏಳು ಪಂದ್ಯಗಳಲ್ಲಿ ಟಾಸ್ ಸೋತಿದ್ದರು.
ಶುಭಮನ್ ಗಿಲ್ ಇದುವರೆಗೆ ಒಟ್ಟು ಆರು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಮೂರು ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರೆ, ಎರಡು ಪಂದ್ಯಗಳಲ್ಲಿ ಸೋತಿದ್ದಾರೆ. ಉಳಿದಂತೆ ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಇದೀಗ ಗಿಲ್ ಪ್ರಸ್ತುತ ತಮ್ಮ ಏಳನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

