ಹೆಲ್ಮಂಡ್: ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಭಾನುವಾರ ಬಾಂಬ್ ದಾಳಿ ಮತ್ತು ಉಗ್ರರಿಂದ ಗುಂಡಿನ ದಾಳಿ ನಡೆದಿದ್ದು, ಎರಡೂ ದಾಳಿಗಳಿಂದ ಒಟ್ಟು ರಕ್ಷಣಾ ಪಡೆಯ 11 ಮಂದಿ ಮೃತಪಟ್ಟಿದ್ದಾರೆ ಎಂದು ಟೊಲೋ ನ್ಯೂಸ್ ವರದಿ ಮಾಡಿದೆ. ನಾವಾ ಜಿಲ್ಲೆಯಲ್ಲಿ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಭದ್ರತಾ ಪಡೆಯ ಇಬ್ಬರು ಮೃತರಾಗಿದ್ದಾರೆ. ಹಾಗೇ, ಉಳಿದ 9 ಮಂದಿ ಹೆಲ್ಮಂಡ್-ಕಂದಹಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಔಟ್ಪೋಸ್ಟ್ ಬಳಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಈ ಎರಡೂ ದಾಳಿಗಳ ಬಗ್ಗೆ ಅಫ್ಘಾನಿಸ್ತಾನ ರಕ್ಷಣಾ ಪಡೆಗಳು ಯಾವುದೇ ಅಧಿಕೃತ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಇನ್ನು ಅಫ್ಘಾನಿಸ್ತಾನದಿಂದ ತಮ್ಮ ಸೈನಿಕರನ್ನು ಹಿಂದಕ್ಕೆ ಕರೆತರುವ ಅಮೆರಿಕದ ನಿರ್ಧಾರವನ್ನು ಅನುಸರಿಸಿ, ಆಸ್ಟ್ರೇಲಿಯಾ ಕೂಡ ಅಲ್ಲಿಂದ ತಮ್ಮ ಸೈನಿಕರನ್ನು ಹಿಂಪಡೆಯಲು ತೀರ್ಮಾನಿಸಿದೆ.
ಜೂ.6ರಂದು ಅಫ್ಘಾನಿಸ್ತಾನದ ಉತ್ತರದಲ್ಲಿ ನೆಲಸ್ಫೋಟಗೊಂಡು ವಾಹನದಲ್ಲಿದ್ದ 11 ಮಂದಿ ಮೃತಪಟ್ಟಿದ್ದರು. ಈ ಸ್ಫೋಟದ ಹೊಣೆಯನ್ನು ತಾಲಿಬಾನ್ ಸೇರಿ ಯಾವುದೇ ಉಗ್ರಸಂಘಟನೆಗಳೂ ಹೊತ್ತಿರಲಿಲ್ಲ. ಅದಕ್ಕೂ ಮೊದಲು ಮೇ ತಿಂಗಳಲ್ಲಿ ಕಾಬೂಲ್ನ ಶಾಲೆಯೊಂದರಲ್ಲಿ ನಡೆದ ಕಾರು ಬಾಂಬ್ ಸ್ಫೋಟದಲ್ಲಿ 55ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
11 security personnel killed in terrorist attacks In Helmand Of Afghanistan