ಜೀವಮಾನದ ಅನುಭವ: ಬಾಹ್ಯಾಕಾಶ ಯಾತ್ರೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ರಿಚರ್ಡ್ ಬ್ರಾನ್ಸನ್ ಹೇಳಿದ ಮಾತಿದು
ಈ ಪ್ರಯಾಣವು ‘ಜೀವನದ ಅತಿಶ್ರೇಷ್ಠ ಅನುಭವ’ ಎಂದು ಅವರು ಬಣ್ಣಿಸಿದರು. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಈ ಪ್ರಯಾಣವು ಮುನ್ನುಡಿ ಬರೆಯಲಿದೆ ಎಂದು ಹೇಳಿದರು.
ನ್ಯೂ ಮೆಕ್ಸಿಕೊ: ಬ್ರಿಟನ್ನ ಶ್ರೀಮಂತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಭಾನುವಾರ ವರ್ಜಿನ್ ಗ್ಯಾಲಕ್ಟಿಕ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರಿದರು. ಈ ಪ್ರಯಾಣವು ‘ಜೀವನದ ಅತಿಶ್ರೇಷ್ಠ ಅನುಭವ’ ಎಂದು ಅವರು ಬಣ್ಣಿಸಿದರು. ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಈ ಪ್ರಯಾಣವು ಮುನ್ನುಡಿ ಬರೆಯಲಿದೆ ಎಂದು ಹೇಳಿದರು. ಬಾಹ್ಯಾಕಾಶದ ನೌಕೆ ಏರಲು ಸೈಕಲ್ನಲ್ಲಿ ಬಂದ ಬ್ರಾನ್ಸನ್ ನಿರ್ಧಾರವೂ ಎಲ್ಲರ ಗಮನ ಸೆಳೆಯಿತು.
ವರ್ಜಿನ್ ಗ್ಯಾಲಸ್ಟಿಕ್ನ ಅದ್ಭುತ ತಂಡಕ್ಕೆ ಅಭಿನಂದನೆಗಳು. 17 ವರ್ಷಗಳ ಅತಿ ಕಠಿಣ ಪರಿಶ್ರಮದಿಂದ ಇದು ಸಾಧ್ಯವಾಯಿತು’ ಎಂದು ವಿಎಸ್ಎಸ್ ಯುನಿಟಿ ಬಾಹ್ಯಾಕಾಶ ನೌಕೆಯಿಂದ ಲೈವ್ಫೀಡ್ನಲ್ಲಿ ಮಾತನಾಡಿದ ಅವರು ಹೇಳಿದರು. ಭೂಮಿಯಿಂದ 85 ಕಿಲೋಮೀಟರ್ ಎತ್ತರಕ್ಕೆ ಏರಿದ ಬಾಹ್ಯಾಕಾಶ ನೌಕೆಯು ಪ್ರಯಾಣಿಕರಿಗೆ ತೂಕ ಕಳೆದುಕೊಳ್ಳುವ ಅನುಭವ ಕಲ್ಪಿಸಿತು. ಭೂಮಿಯನ್ನು ಒಂದು ಗೋಲವಾಗಿ ಒಂದೇ ಎಟುಕಿಗೆ ಕಣ್ಣು ತುಂಬಿಕೊಳ್ಳುವ ಅವಕಾಶವನ್ನೂ ಈ ನೌಕೆ ನೀಡಿತು.
ಟೇಕ್ ಆಫ್ ಆದ ಒಂದು ತಾಸಿನ ಅವಧಿಯಲ್ಲಿ ನಿಗದಿತ ಅಂತರವನ್ನು ಯಾವುದೇ ಗೊಂದಲಗಳಿಲ್ಲದೆ ಬಾಹ್ಯಾಕಾಶ ನೌಕೆ ಕ್ರಮಿಸಿತು. ಬಾಹ್ಯಾಕಾಶ ಪ್ರವಾಸೋದ್ಯಮಕ್ಕಾಗಿ ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿರುವ ಅಮೆಜಾನ್ ಕಂಪನಿಗೆ ಇದು ಹಿನ್ನೆಡೆಯಾದಂತೆಯೇ ಸರಿ. ಏಕೆಂದರೆ ಅಮೆಜಾನ್ನ ಬಾಹ್ಯಾಕಾಶಯಾನಕ್ಕೂ ಈಗಾಗಲೇ ದಿನಾಂಕ ನಿಗದಿಯಾಗಿದೆ. ಆದರೆ ಅಮೆಜಾನ್ ಸಂಸ್ಥೆಯ ಅಂತಿಮ ಹಂತದ ಯಾನ ಆರಂಭವಾಗುವ ಮೊದಲೇ ರಿಚರ್ಡ್ ಬ್ರಾನ್ಸನ್ ಸ್ವತಃ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಾರೆ.
ಇದಕ್ಕೂ ಮೊದಲು ವಿಎಸ್ಎಸ್ ಯೂನಿಟಿ ಬಾಹ್ಯಾಕಾಶ ನೌಕೆಯು 50,000 ಅಡಿಗಳಷ್ಟು ಎತ್ತರಕ್ಕೆ ವಿಮಾನವೊಂದರಲ್ಲಿ ಮೇಲೇರಿ, ಅಲ್ಲಿಂದ ರಾಕೆಟ್ ಚಾಲಿತ ಎಂಜಿನ್ಗಳಿಂದ ಶಕ್ತಿಪಡೆದು ಮತ್ತಷ್ಟು ಮೇಲಕ್ಕೇರಿತು. ಬಾಹ್ಯಾಕಾಶ ವಿಮಾನದಲ್ಲಿ ಇಬ್ಬರು ಪೈಲಟ್ಗಳು ಮತ್ತು ರಿಚರ್ಡ್ ಬ್ರಾನ್ಸನ್ ಸೇರಿದಂತೆ ನಾಲ್ವರು ಪ್ರಯಾಣಿಕರಿದ್ದರು. ಬಾಹ್ಯಾಕಾಶದದಲ್ಲಿ ಗಮ್ಯಸ್ಥಾನ ಮುಟ್ಟಿದ ನಂತರ ಮತ್ತೆ ಭೂಮಿಯ ವಾತಾವರಣ ಪ್ರವೇಶಿಸಿದ ನೌಕೆಯು ರನ್ವೇಗೆ ಬಂದಿಳಿಯಿತು.
ಭೂಸ್ಪರ್ಶವಾದ ನಂತರ ನಗುಮುಖದ ಬ್ರಾನ್ಸನ್ ತನ್ನ ಪ್ರೀತಿಪಾತ್ರರನ್ನು ಬಿಗಿದಪ್ಪಿದರು. ಬಾಹ್ಯಾಕಾಶ ಯಾನಕ್ಕೆಂದು ವಿಮಾನ ನಿಲ್ದಾಣಕ್ಕೆ ರಿಚರ್ಡ್ ಸೈಕಲ್ನಲ್ಲಿ ಬಂದಿದ್ದು ಎಲ್ಲರ ಗಮನ ಸೆಳೆಯಿತು. ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ ನಂತರ ಬಾಹ್ಯಾಕಾಶ ನೌಕೆ ಏರಿದರು. ಸ್ಪೇಸ್ ಎಕ್ಸ್ ಸಂಸ್ಥೆಯ ಮಾಲೀಕ ಎಲನ್ ಮಸ್ಕ್ ಸಹ ಈ ಸಂದರ್ಭ ರನ್ವೇ ಸಮೀಪ ಬಂದಿದ್ದರು. ಅವರೊಂದಿಗೆ ಬ್ರಾನ್ಸನ್ ಚಿತ್ರ ತೆಗೆಸಿಕೊಂಡರು.
(Richard Branson After Few Minutes Of Space Flight says its an Experience Of Lifetime)
ಇದನ್ನೂ ಓದಿ: Sirisha Bandla: ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ: ನಭಕ್ಕೆ ನೆಗೆದ ರಿಚರ್ಡ್ ಬ್ರಾನ್ಸನ್
ಇದನ್ನೂ ಓದಿ: ಮೂವರು ಗಗನಯಾತ್ರಿಗಳನ್ನು ಹೊತ್ತು ಆಕಾಶಕ್ಕೆ ಹಾರಿದ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ