Explainer: ಏನಿದು ರಿಪೇರಿ ಮಾಡಿಕೊಳ್ಳುವ ಹಕ್ಕು ಬೇಕೆಂಬ ಹೊಸ ಚಳವಳಿ? ಏನಿದೆ ಅನಿವಾರ್ಯತೆ?

ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ ‘ರಿಪೇರಿ ಹಕ್ಕು’ ಬೇಕೆಂಬ ಚಳವಳಿ ಆರಂಭವಾಗಿದೆ. Right to Repair ಪರವಾದ ಕಾನೂನುಗಳನ್ನು ಜಾರಿಗೊಳಿಸಲು ಹಲವು ದೇಶಗಳು ಮುಂದಾಗಿವೆ. ಆದರೆ ಮಾರುಕಟ್ಟೆ ಏಕಸ್ವಾಮ್ಯ ಹೊಂದಿರುವ ಕಂಪನಿಗಳ ಪ್ರಬಲ ಲಾಬಿ ಈ ಚಳವಳಿ ಬೆಳೆಯದಂತೆ ಅಡ್ಡ ನಿಂತಿದೆ.

Explainer: ಏನಿದು ರಿಪೇರಿ ಮಾಡಿಕೊಳ್ಳುವ ಹಕ್ಕು ಬೇಕೆಂಬ ಹೊಸ ಚಳವಳಿ? ಏನಿದೆ ಅನಿವಾರ್ಯತೆ?
ನಾವು ದುಡ್ಡು ತೆತ್ತು ಖರೀದಿಸಿದ ಸಾಧನಗಳ ರಿಪೇರಿ ಹಕ್ಕು ನಮಗೆ ಸಿಗಬೇಕೆಂಬ ಚಳವಳಿ ಇದೀಗ ಬಲ ಪಡೆದುಕೊಳ್ಳುತ್ತಿದೆ. (ಪ್ರಾತಿನಿಧಿಕ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jul 12, 2021 | 8:43 PM

ತಾತನ ಕಾಲದ ರೇಡಿಯೊ ಮೊಮ್ಮಗನ ಕಾಲಕ್ಕೂ ಓಡುತ್ತಿತ್ತು. ಅದರ ಗಂಟಲು ಕೆಟ್ಟರೆ ಮೂಲೆಯಂಗಡಿಯ ಟೆಕ್ನಿಷಿಯನ್​ ಅದನ್ನು ಫಟಾಫಟ್ ರಿಪೇರಿ ಮಾಡಿಕೊಡುತ್ತಿದ್ದ. ಆದರೆ ಮೊಮ್ಮಗನ ಕೈಲಿರುವ ಸ್ಮಾರ್ಟ್​ ಫೋನ್ ಮಾತ್ರ ಖರೀದಿಸಿದ ಮೂರೇ ವರ್ಷಕ್ಕೆ ಕೆಲಸ ನಿಲ್ಲಿಸುತ್ತಿದೆ. ಹೊಸದು ಕೊಳ್ಳಬೇಕಾದ ಅನಿವಾರ್ಯ ಕೊಳ್ಳುಬಾಕರಾಗಿ ಈಗ ಮನೆಮಂದಿಯೆಲ್ಲಾ ಬದಲಾಗಿದ್ದಾರೆ. ನೋಡಲು ಆ ಮೊಬೈಲ್ ಚೆನ್ನಾಗಿಯೇನೋ ಆದರೆ ಯಾವುದೋ ಬಿಡಿಭಾಗ ಹಾಳಾಗಿರಬಹುದು ಅಥವಾ ನಿಮ್ಮ ಈ ಮೊಬೈಲ್​ ವರ್ಷನ್​ಗೆ ಆ್ಯಪ್​ ಅಪ್​ಡೇಟ್​  ಆಗುವುದಿಲ್ಲ, ಇನ್​ಸ್ಟಾಲ್ ಆಗುವುದಿಲ್ಲ ಎಂಬ ಪಾಪ್​ಅಪ್​ಗಳು ಕಾಣಿಸುತ್ತಿರಬಹುದು. ಒಟ್ಟಿನಲ್ಲಿ ಆ ಮೊಬೈಲ್ ಈಗ ವೇಸ್ಟ್​.

ನಾವು ಭಾರತೀಯರು. ಯಾವುದೇ ಉತ್ಪನ್ನವನ್ನು ಸಾಧ್ಯವಾದಷ್ಟೂ ಹೆಚ್ಚು ವರ್ಷ ಬಳಸಬೇಕು ಎಂಬ ಮನಃಸ್ಥಿತಿ ಇರುವವರು. ಆದರೆ ಐದು ವರ್ಷದ ಹಿಂದೆ ಕೊಂಡ ಐಪಾಡ್​ ಮಿನಿಗೆ ಈಗ ಆ್ಯಪಲ್​ ಐಒಸ್​​ನ 13ನೇ ಆವೃತ್ತಿ ಇನ್​ಸ್ಟಾಲ್ ಆಗ್ತಿಲ್ಲ. ಐಪಾಡ್​ನ ಹಾರ್ಡ್​ವೇರ್ ಸಪೋರ್ಟ್​ ಮಾಡುತ್ತಿದ್ದರೂ ಆ್ಯಪಲ್ ಬೇಕೆಂದೇ 13ನೇ ಆವೃತ್ತಿ ಇನ್​ಸ್ಟಾಲ್ ಆಗುವುದನ್ನು ತಡೆಹಿಡಿದಿದೆ. ಇತ್ತ ಐಪಾಡ್​ಗೆ ಆ್ಯಪ್ ತಯಾರಿಸುವ ನೆಟ್​ಫ್ಲಿಕ್ಸ್​ನಂಥ ಸಂಸ್ಥೆಗಳು 13ನೇ ಆವೃತ್ತಿಗೆ ಮಾತ್ರ ಕಂಪಾಟಿಬಲ್ ಆಗುವಂಥ ಆ್ಯಪ್​ ಅಪ್​ಡೇಟ್​ಗಳನ್ನು ಬಿಟ್ಟಿವೆ. ಐಪಾಡ್​ನಲ್ಲಿ ನೆಟ್​ಫ್ಲಿಕ್ಸ್​ ಬಳಸಬೇಕೆಂದರೆ ನೀವು ಅನಿವಾರ್ಯವಾಗಿ ಹೊಸ ಐಪಾಡ್​ ಖರೀದಿಸಬೇಕು. ಈಗಂತೂ ಎಲ್ಲೆಲ್ಲೂ ಕ್ಲಬ್​ಹೌಸ್​ ಭರಾಟೆ. ಆದರೆ ಹಲವರು ಇನ್ನೂ ಜೋಪಾನವಾಗಿ ಇರಿಸಿಕೊಂಡಿರುವ ರೆಡ್​ಮಿ ನೋಟ್​ 3ಗೆ ಈ ಆ್ಯಪ್​ ಇನ್​ಸ್ಟಾಲ್ ಆಗುತ್ತಿಲ್ಲ. ಇಂಥವರು ಕ್ಲಬ್​ಹೌಸ್​ ಕೇಳಬೇಕೆಂದರೆ ಹೊಸ ಫೋನ್ ಖರೀದಿಸಬೇಕಾದ್ದು ಅನಿವಾರ್ಯ.

ಒಟ್ಟಾರೆಯಾಗಿ ನಮ್ಮ ಪರಿಸ್ಥಿತಿ ಹೇಗಾಗಿದೆಯೆಂದರೆ ವರ್ಷಕ್ಕೊಂದು ಹೊಸ ಫೋನ್ ಬರುತ್ತೆ, ವರ್ಷಕ್ಕೊಂದು ಹೊಸ ಆಪರೇಟಿಂಗ್ ಸಿಸ್ಟಮ್ ಬರುತ್ತೆ. ಈ ಎರಡೂ ಸಂದರ್ಭಗಳಲ್ಲಿ ನಾವು ಈಗ ಬಳಸುತ್ತಿರುವ ಸಾಧನಗಳು ನಿರುಪಯುಕ್ತವಾಗುತ್ತವೆ. ಅಷ್ಟರಲ್ಲಿ ಅಪ್ಪಿತಪ್ಪಿ ಈ ಸ್ಮಾರ್ಟ್​ ಸಾಧನಗಳು ಕೆಟ್ಟವು ಎಂದುಕೊಳ್ಳಿ. ಅವರಿವರ ಹತ್ತಿರ ಇವುಗಳ ರಿಪೇರಿ ಸಾಧ್ಯವಿಲ್ಲ. ಈ ಕಂಪನಿಗಳು ಹೇಳುವ ಸ್ಥಳಕ್ಕೇ ಹೋಗಿ, ಅವರು ನಿಗದಿಪಡಿಸಿರುವಷ್ಟೇ ಹಣ ತೆತ್ತು ರಿಪೇರಿ ಮಾಡಿಸಿಕೊಳ್ಳಬೇಕು. ಅಂಥ ಕೇಂದ್ರಗಳಲ್ಲಿ ಬಿಡಿಭಾಗ ಇಲ್ಲ ಎಂದರೆ ಮುಗಿದೇ ಹೋಯಿತು. ನಿಮ್ಮ ಕೈಲಿರುವ ಚಿನ್ನ ಒಂದೇ ನಿಮಿಷಕ್ಕೆ ಕಸವಾಗುತ್ತೆ.

ದೈತ್ಯ ತಂತ್ರಜ್ಞಾನ ಕಂಪನಿಗಳ ಏಕಸ್ವಾಮ್ಯ ಆರಂಭವಾದ ನಂತರ ಗ್ರಾಹಕರು ಅನುಭವಿಸುತ್ತಿರುವ ಇಂಥ ಸಂಕಷ್ಟಗಳಿಗೆ ಮುಕ್ತಿ ಸಿಗಬೇಕೆಂದೇ ಇದೀಗ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ ‘ರಿಪೇರಿ ಹಕ್ಕು’ ಬೇಕೆಂಬ ಚಳವಳಿ ಆರಂಭವಾಗಿದೆ. Right to Repair ಪರವಾದ ಕಾನೂನುಗಳನ್ನು ಜಾರಿಗೊಳಿಸಲು ಹಲವು ದೇಶಗಳು ಮುಂದಾಗಿವೆ. ಆದರೆ ಮಾರುಕಟ್ಟೆ ಏಕಸ್ವಾಮ್ಯ ಹೊಂದಿರುವ ಕಂಪನಿಗಳ ಪ್ರಬಲ ಲಾಬಿ ಈ ಚಳವಳಿ ಬೆಳೆಯದಂತೆ ಅಡ್ಡ ನಿಂತಿದೆ.

ಇದನ್ನೂ ಓದಿ: Explainer: ಡ್ರೋನ್ ದಾಳಿ ತಡೆಯಲು ಸಾಧ್ಯವೇ? ಹೇಗಿದೆ ಭಾರತದ ರಕ್ಷಣಾ ವ್ಯವಸ್ಥೆ?

Right-To-Repair

ರಿಪೇರಿ ಹಕ್ಕು ಪ್ರತಿಪಾದಕರ ಬೇಡಿಕೆಗಳಿವು

ನನ್ನ ಹಣಕ್ಕೆ ಬೆಲೆಯಿಲ್ಲವೇ? ಸಾಮಾನ್ಯ ಗ್ರಾಹಕನೊಬ್ಬ ಎಲೆಕ್ಟ್ರಾನಿಕ್ ಸಾಧನ ಖರೀದಿಸುವಾಗ ಅದು ಬಹುಬೇಗ ನಿರುಪಯುಕ್ತ ಆಗಬಹುದು ಎಂಬ ಅರಿವು ಬಹಳ ಸ್ಪಷ್ಟವಾಗಿಯೇ ಇರುತ್ತದೆ. ಇಂಗ್ಲಿಷ್​ನ ಡಿವೈಸ್ ಪದಕ್ಕೆ ಪರ್ಯಾಯವಾಗಿ ಈ ಲೇಖನದಲ್ಲಿ ಸಾಧನ ಎಂಬ ಪದ ಬಳಸಲಾಗಿದೆ. ಉದಾಹರಣೆಗೆ ಮೊಬೈಲ್ ಎಂದುಕೊಳ್ಳೋಣ. ನೀವು ಖರೀದಿಸಿದ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಕಂಪನಿ ಅದೇ ಸಾಧನದ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದಾಗ, ಇದಕ್ಕಿಂತಲೂ ಸುಧಾರಿತ ಆವೃತ್ತಿ ಮಾರುಕಟ್ಟೆಗೆ ಬಂದಾಗ, ಇದೇ ಸಾಧನಕ್ಕೆ ಹೊಸ ಅಪ್​ಡೇಟ್ ಬಂದಾಗ ಈಗ ಖರೀದಿಸಿದ್ದು ನಿರುಪಯುಕ್ತವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

ನಿಮ್ಮ ಸಾಧನವು ಹಳೆಯದಾದಂತೆ ಹಲವು ಸಮಸ್ಯೆಗಳು ಮುನ್ನೆಲೆಗೆ ಬರುತ್ತವೆ. ನಿಮ್ಮ ಸ್ಮಾರ್ಟ್​ಫೋನ್ ತುಂಬಾ ನಿಧಾನವಾಗಬಹುದು. ಒಂದು ಹಂತದಲ್ಲಿ ಬಹುತೇಕ ನಿರುಪಯುಕ್ತವೇ ಆಗಿಬಿಡಬಹುದು. ನೀವು ಒಂದು ವೇಳೆ ಗೇಮಿಂಗ್ ಕನ್​ಸೋಲ್ ಬಳಸುತ್ತಿದ್ದೀರಿ ಎಂದಾದರೆ ಹಲವು ಕಠಿಣ ರಿಸೆಟ್​ಗಳು ಅನಿವಾರ್ಯವಾಗಬಹುದು. ಇಂಥ ಪರಿಸ್ಥಿತಿ ಬಂದಾಗ ನೀವು ಹಣ ಕೊಟ್ಟು ಮೊಬೈಲ್ ಅಥವಾ ಇತರ ಯಾವುದೇ ಸಾಧನ ಖರೀದಿಸಿದ್ದರೂ ನಿಮ್ಮ ಮಾಲೀಕತ್ವಕ್ಕೆ ಹಲವು ಮಿತಿಗಳಿರುತ್ತವೆ. ಪರೋಕ್ಷವಾಗಿ ಆ ಸಾಧನಗಳ ಉತ್ಪಾದಕರೇ ಕೊನೆಯವರೆಗೂ ಅದನ್ನು ನಿಯಂತ್ರಿಸುತ್ತಿರುತ್ತಾರೆ. ಹಲವು ಸಂದರ್ಭಗಳಲ್ಲಿ ರಿಪೇರಿ ಮಾಡುವುದೇ ಅಸಾಧ್ಯ ಎಂಬಂಥ ಪರಿಸ್ಥಿತಿ ತಂದೊಡ್ಡುತ್ತಾರೆ. ಯಾರು ಈ ಸಾಧನವನ್ನು ರಿಪೇರಿ ಮಾಡಬಹುದು ಎಂಬುದನ್ನೂ ಅವರೇ ನಿರ್ದೇಶಿಸುತ್ತಾರೆ. ಹೀಗಾಗಿ ರಿಪೇರಿ ಎಂಬುದು ಅತ್ಯಂತ ದುಬಾರಿ ಸಾಹಸವಾಗುತ್ತದೆ. ಎಷ್ಟೋ ಸಲ ರಿಪೇರಿಗಿಂತಲೂ ಹೊಸ ಸಾಧನ ಖರೀದಿಸುವುದೇ ಒಳಿತು ಎಂಬ ಪರಿಸ್ಥಿತಿಗೆ ನಿಮ್ಮನ್ನು ದೂಡುತ್ತಾರೆ.

ಕಷ್ಟಪಟ್ಟು ದುಡಿದ ಹಣ ತೆತ್ತು ಖರೀದಿಸಿದ ಗ್ಯಾಜೆಟ್​ಗಳನ್ನು ನಮಗೆ ಬೇಕೆಂದಾಗ ರಿಪೇರಿ ಮಾಡಿಕೊಳ್ಳಲು ಅವಕಾಶವಿಲ್ಲವೇ? ಇದೀಗ ಈ ಪ್ರಶ್ನೆ ವಿಶ್ವದೆಲ್ಲೆಡೆಯಿಂದ ಕೇಳಿ ಬರುತ್ತಿದೆ. ‘ರಿಪೇರಿ ಮಾಡಿಕೊಳ್ಳುವ ಹಕ್ಕು’ (Right to Repair) ಆಂದೋಲನ ಒಂದು ದೊಡ್ಡಮಟ್ಟದ ಚಳವಳಿಯಾಗಿ ಬೆಳೆಯುತ್ತಿದೆ. ಈಚಿನ ಕೆಲ ವರ್ಷಗಳಲ್ಲಿ ಹಲವು ದೇಶಗಳ ಸಂಸತ್ತುಗಳ ಸಹ ಜನರ ರಿಪೇರಿ ಹಕ್ಕನ್ನು ಬೆಂಬಲಿಸುವ, ಗೌರವಿಸುವ ಕಾನೂನುಗಳನ್ನು ರೂಪಿಸುತ್ತಿವೆ. ಆದರೆ ಆ್ಯಪಲ್ ಮತ್ತು ಮೈಕ್ರೊಸಾಫ್ಟ್​ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದ ಹಲವು ದೈತ್ಯ ಕಂಪನಿಗಳು ಈ ಚಳವಳಿಯನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ.

ಕಳೆದ ಶುಕ್ರವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಸಂಬಂಧ ಮಹತ್ವದ ಕಾರ್ಯಾದೇಶವೊಂದಕ್ಕೆ ಸಹಿ ಹಾಕಿದ್ದಾರೆ. ಸ್ಮಾರ್ಟ್​ ಸಾಧನಗಳ ಉತ್ಪಾದಕರು ಗ್ರಾಹಕರ ಮೇಲೆ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಅಮೆರಿಕದ ಕೇಂದ್ರ ವಾಣಿಜ್ಯ ಆಯೋಗಕ್ಕೆ (Federal Trade Commission) ಸೂಚನೆ ನೀಡಿದ್ದಾರೆ. ಹಣ ತೆತ್ತು ಖರೀದಿಸಿದವರಿಗೆ ಅವು ಕೆಟ್ಟುಹೋದಾಗ ರಿಪೇರಿ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಬೇಕು ಎನ್ನುವುದು ಬೈಡೆನ್ ನಿಲುವು. ಬ್ರಿಟನ್​ ಸಹ ಇಂಥದ್ದೇ ನಿಯಮಗಳನ್ನು ಕಾನೂನು ಆಗಿಸುವ ಪ್ರಕ್ರಿಯೆ ಆರಂಭಿಸಿದೆ. ಟಿವಿ ಮತ್ತು ವಾಷಿಂಗ್​ಮಷಿನ್​ನಂಥ ಗ್ಯಾಜೆಟ್​ಗಳು ಕೆಟ್ಟು ಹೋದಾಗ ಸುಲಭವಾಗಿ ರಿಪೇರಿ ಮಾಡಿಸಿಕೊಳ್ಳಲು ಅವಕಾಶ ಇರಬೇಕು ಎಂದು ಬ್ರಿಟನ್ ಸರ್ಕಾರ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Explainer: ನಮ್ಮ ಮೂಲ ಯಾವುದು? ಚೀನಾದಲ್ಲಿ ಸಿಕ್ಕ ಹಳೇ ತಲೆಬುರುಡೆ ಹೇಳಿದ ಹೊಸ ಪಾಠಗಳಿವು

Right-To-Repair

ರಿಪೇರಿ ಹಕ್ಕು ಬೇಕೆಂಬ ಹಕ್ಕೊತ್ತಾಯ ಪ್ರಬಲವಾಗುತ್ತಿದೆ

ರಿಪೇರಿ ಹಕ್ಕಿನ ಚಳವಳಿ ಅಂದ್ರೇನು? ರಿಪೇರಿ ಮಾಡಿಕೊಳ್ಳುವ ಸ್ವಾತಂತ್ರ್ಯ ನಮಗೆ ಬೇಕು ಎಂಬುದು ಈಗ ಒಂದು ದೊಡ್ಡ ಚಳವಳಿಯಾಗಿ ಬೆಳೆಯುತ್ತಿದೆ. ವಿಶ್ವದ ವಿವಿಧೆಡೆಯ ಹಲವು ಹೋರಾಟಗಾರರು ಮತ್ತು ಸಂಘಟನೆಗಳು ಗ್ರಾಹಕರ ಹಕ್ಕಿ ಭಾಗವಾಗಿ ರಿಪೇರಿ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಇರಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಈ ಚಳವಳಿ 1950ರಿಂದಲೂ ಚಾಲ್ತಿಯಲ್ಲಿರುವುದು ಅರಿವಿಗೆ ಬರುತ್ತದೆ.

ಯಾವುದೇ ಉತ್ಪನ್ನವನ್ನು ಕಂಪನಿಗಳು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ನಿರ್ದಿಷ್ಟಾಗಿ ಇಂತಿಷ್ಟು ವರ್ಷ ಆ ಉತ್ಪನ್ನಕ್ಕೆ ಅಗತ್ಯ ಬೆಂಬಲ ಒದಗಿಸುವ ಖಾತ್ರಿ ನೀಡಬೇಕು. ಬಿಡಿಭಾಗಗಳು ಮತ್ತು ಹೇಗೆ ರಿಪೇರಿ ಮಾಡಿಕೊಳ್ಳಬೇಕು ಎಂಬ ಮಾಹಿತಿಯು ಗ್ರಾಹಕರಿಗೆ ಸುಲಭವಾಗಿ ಸಿಗುವಂತಿರಬೇಕು. ಉತ್ಪನ್ನಗಳ ಬಾಳಿಕೆ ಅವಧಿ ಹೆಚ್ಚು ಮಾಡಲು ಕಂಪನಿಗಳು ಬದ್ಧತೆ ಪ್ರದರ್ಶಿಸಬೇಕು. ಯಾವುದೋ ಸಣ್ಣದೊಂದು ಬಿಡಿಭಾಗ ಹಾಳಾಯಿತು ಎಂಬ ಕಾರಣಕ್ಕೆ ಎಲೆಕ್ಟ್ರಾನಿಕ್ ಸಾಧನವೊಂದು ತ್ಯಾಜ್ಯವಾಗಬಾರದು. ಇ-ತ್ಯಾಜ್ಯದಿಂದ ಆಗುತ್ತಿರುವ ಪರಿಸರ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲು ಈ ಕ್ರಮ ಅನಿವಾರ್ಯ ಎನ್ನುವುದು ಈ ಚಳವಳಿಕಾರರು ಮತ್ತು ರಿಪೇರಿ ಹಕ್ಕನ್ನು ಪ್ರತಿಪಾದಿಸುತ್ತಿರುವ ಸಂಸ್ಥೆಗಳ ವಾದ.

ಎಲೆಕ್ಟ್ರಾನಿಕ್ ಸಾಧನಗಳ ತಯಾರಕರು ಉದ್ದೇಶಪೂರ್ವಕವಾಗಿಯೇ ಒಂದು ಸೀಮಿತ ಅವಧಿಯ ನಂತರ ಈ ಸಾಧನಗಳು ನಿರುಪಯುಕ್ತವಾಗುವಂತೆ ಮಾಡುತ್ತಿದ್ದಾರೆ. ಗ್ರಾಹಕರು ಹೊಸಹೊಸ ಸಾಧನಗಳನ್ನು ಖರೀದಿಸಲು ಮುಂದಾಗುವಂತೆ ಮಾಡುವುದು ಈ ಕಂಪನಿಗಳ ಉದ್ದೇಶ. ಇದೇ ಕಾರಣಕ್ಕೆ ಸಾಫ್ಟ್​ವೇರ್ ಅಪ್​ಡೇಟ್ ನಿಲ್ಲಿಸುವುದು, ಬಿಡಿಭಾಗಗಳು ಅಲಭ್ಯವಾಗುವಂತೆ ಮಾಡುವ ತಂತ್ರಗಳನ್ನು ಅನುಸರಿಸುತ್ತಾರೆ. ಒಂದು ಸಣ್ಣ ಕಾರಣಕ್ಕೆ ಯಾವುದೇ ಉತ್ಪನ್ನ ಕೆಲಸ ಮಾಡುವುದು ನಿಲ್ಲಿಸಿದರೂ ಕೇವಲ ಬಿಡಿಭಾಗ ಬದಲಿಸಲು ಅವಕಾಶವೇ ಇಲ್ಲದಂತೆ ಆಗುತ್ತದೆ. ಆಗ ಅನಿವಾರ್ಯವಾಗಿ ಇಡೀ ಸಾಧನವನ್ನು ಬದಲಿಸಬೇಕಾಗುತ್ತದೆ. ಇದು ಪರಿಸರದ ಮೇಲೆ ಅತಿಯಾದ ಒತ್ತಡ ಹೇರುವುದಲ್ಲದೆ ನೈಸರ್ಗಿಕ ಸಂಪನ್ಮೂಲಗಳು ವ್ಯರ್ಥವಾಗುವಂತೆ ಮಾಡುತ್ತದೆ.

ಬಿಡಿಭಾಗಗಳ ಮಾರಾಟಗಾರರು ಮತ್ತು ಸಣ್ಣಪುಟ್ಟ ತಂತ್ರಜ್ಞರಿಗೆ ಇದರಿಂದ ಉದ್ಯೋಗವೂ ಸಿಗಲಿದೆ. ಸ್ಥಳೀಯ ಆರ್ಥಿಕತೆಯಲ್ಲಿ ಇವರು ಮಹತ್ವದ ಪಾತ್ರ ವಹಿಸುತ್ತಾರೆ. ಒಬ್ಬ ಉತ್ಪಾದಕನೇ ತನ್ನ ಉತ್ಪನ್ನಗಳ ರಿಪೇರಿಯಲ್ಲಿ ಏಕಸ್ವಾಮ್ಯ ಸಾಧಿಸಿದರೆ ಇಂಥವರು ನಿರುದ್ಯೋಗಿಗಳಾಗುತ್ತಾರೆ. ಅಷ್ಟು ಮಾತ್ರವಲ್ಲ, ರಿಪೇರಿಯಂಥ ಸೇವಾವಲಯದಲ್ಲಿ ಸ್ಪರ್ಧೆ ಇದ್ದಾಗ ಮಾತ್ರ ಬೆಲೆ ನಿಯಂತ್ರಣದಲ್ಲಿರುತ್ತದೆ. ಏಕಸ್ವಾಮ್ಯ ಬಂದರೆ ಸೇವೆಗಳಿಗೆ ಅವರು ನಿಗದಿಪಡಿದಷ್ಟು ಬೆಲೆ ತೆರಬೇಕಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಇಂಥ ವಿದ್ಯಮಾನಗಳು ವರದಿಯಾಗುತ್ತಿವೆ.

ಸ್ಮಾರ್ಟ್​ ಸಾಧನಗಳ ಉತ್ಪಾದಕರು ಈ ಚಳವಳಿ ವಿರೋಧಿಸುತ್ತಿರುವುದೇಕೆ? ಆ್ಯಪಲ್, ಮೈಕ್ರೊಸಾಫ್ಟ್​, ಅಮೆಜಾನ್ ಮತ್ತು ಟೆಸ್ಲಾ ಸೇರಿದಂತೆ ದೈತ್ಯ ಟೆಕ್ ಕಂಪನಿಗಳು ಈ ಚಳವಳಿಯನ್ನು ಶತಾಯಗತಾಯ ಹತ್ತಿಕ್ಕಲು ಕಾರ್ಯತಂತ್ರ ರೂಪಿಸುತ್ತಿವೆ. ಯಾವುದೇ ಸ್ಮಾರ್ಟ್​ ಎಲೆಕ್ಟ್ರಾನಿಕ್ ಸಾಧನ ಕೇವಲ ಭೌತಿಕ ವಸ್ತು ಅಷ್ಟೇ ಅಲ್ಲ. ಬುದ್ಧಿವಂತಿಕೆ ಮತ್ತು ಅತಿಸೂಕ್ಷ್ಮ ಕೌಶಲ್ಯಕ್ಕೆ ಸಂಬಂಧಿಸಿದ ಹಲವು ಅಂಶಗಳು ಅದರಲ್ಲಿರುತ್ತವೆ. ಸಹಜವಾಗಿಯೇ ಇದು ಇಂಟೆಲೆಕ್ಚುವಲ್ ಪ್ರಾಪರ್ಟಿ ಮತ್ತು ಕಾಪಿರೈಟ್​ ವ್ಯಾಪ್ತಿಗೂ ಬರುತ್ತವೆ. ಹೀಗಾಗಿ ಇಂಥ ಸಾಧನಗಳ ಮೇಲೆ ಕೊನೆಯವರೆಗೂ ಅವನ್ನು ರೂಪಿಸಿದ ಕಂಪನಿಗಳ ಹಕ್ಕು ಮುಂದುವರಿಯುತ್ತದೆ ಎನ್ನುವುದು ಇಂಥ ಕಂಪನಿಗಳ ವಾದ. ರಿಪೇರಿ ಸೇವೆಗಳನ್ನು ಒದಗಿಸಲು ಖಾಸಗಿಯವರಿಗೆ ಅವಕಾಶ ನೀಡಿದರೆ ಅವರು ಈ ಸಾಧನ ರೂಪುಗೊಂಡಿರುವ ರಹಸ್ಯಗಳನ್ನು ಅರಿತುಬಿಡುತ್ತಾರೆ. ಇದರಿಂದ ಇಂಥ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಮೂಲ ಕಂಪನಿಗಳಿಗೆ ನಷ್ಟವಾಗುತ್ತದೆ. ಮಾತ್ರವಲ್ಲ, ತಪ್ಪಾದ ನಿರ್ವಹಣೆಯಿಂದ ಗ್ರಾಹಕರಿಗೂ ಅಪಾಯವಾಗಬಹುದು ಎನ್ನುತ್ತಾರೆ ಈ ಸಂಸ್ಥೆಗಳ ಪರ ವಾದ ಮಂಡಿಸುವವರು.

ರಿಪೇರಿ ಸ್ವಾತಂತ್ರ್ಯ ಪ್ರತಿಪಾದನೆಯನ್ನು ಅಮೆರಿಕದಲ್ಲಿ ಟೆಸ್ಲಾ ಪ್ರಬಲವಾಗಿ ವಿರೋಧಿಸುತ್ತಿದೆ. ಇಂಥ ಉಪಕ್ರಮಗಳಿಂದ ದತ್ತಾಂಶಗಳ ಸುರಕ್ಷೆ ಮತ್ತು ಸೈಬರ್​ ಸೆಕ್ಯುರಿಟಿಗೆ ಧಕ್ಕೆ ಆಗಬಹುದು ಎಂದು ಟೆಸ್ಲಾ ಹೇಳುತ್ತಿದೆ.

ತಂತ್ರಜ್ಞಾನ ಗುಟ್ಟು ಕಾಪಾಡಿಕೊಳ್ಳುವುದರಲ್ಲಿ ಆ್ಯಪಲ್​ಗೆ ಕುಖ್ಯಾತಿಯಿದೆ. ತಾನು ತರಬೇತಿ ನೀಡಿದ ತಂತ್ರಜ್ಞರು ಮಾತ್ರವೇ ಆ್ಯಪಲ್ ಉತ್ಪನ್ನಗಳನ್ನು ರಿಪೇರಿ ಮಾಡಬೇಕು, ಯಾವುದೇ ಸಾಧನದ ಆಯಸ್ಸನ್ನು ತಾನೇ ನಿರ್ಧರಿಸಬೇಕೆಂಬ ಹಟ ಆ್ಯಪಲ್ ಕಂಪನಿಯದು. ಇದಕ್ಕೆ ತಕ್ಕಂತೆಯೇ ಬಿಡಿಭಾಗಗಳ ಪೂರೈಕೆ ಮತ್ತು ಉತ್ಪನ್ನಗಳ ಕೈಪಿಡಿ ವಿಚಾರದಲ್ಲಿ ಆ್ಯಪಲ್ ಬಿಗಿಹಿಡಿತ ಹೊಂದಿದೆ. ಆದರೆ ಇದೀಗ ಆ್ಯಪಲ್ ಕಂಪನಿಯ ಸಹ ಸಂಸ್ಥಾಪಕ ಸ್ಟೀವ್​ ವೊಝೈಕ್ ರಿಪೇರಿ ಹಕ್ಕಿನ ಪರವಾಗಿ ಧ್ವನಿ ಎತ್ತಿದ್ದಾರೆ. ಮುಕ್ತ ತಂತ್ರಜ್ಞಾನದ ವಾತಾವರಣದಲ್ಲಿ ಬೆಳೆಯದಿದ್ದರೆ ಆ್ಯಪಲ್ ಈ ಪ್ರಮಾಣಕ್ಕೆ ಬೆಳೆಯುತ್ತಿರಲಿಲ್ಲ ಎಂದು ಅವರು ಹಲವೆಡೆ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಹೆಚ್ಚು ವರ್ಷ ಬಾಳಿಕೆ ಬರುವ ಉತ್ಪನ್ನಗಳನ್ನು ತಯಾರಿಸಲು ಗಮನ ನೀಡುತ್ತೇವೆ ಎಂದು ಈ ಕಂಪನಿಗಳು ಭರವಸೆ ನೀಡುತ್ತಿವೆ. ಇ-ತ್ಯಾಜ್ಯ ಕಡಿಮೆ ಮಾಡಲೂ ಬದ್ಧವಾಗಿರುವುದಾಗಿ ಆ್ಯಪಲ್ ಹೇಳಿದೆ. ಮುಕ್ತ ಮತ್ತು ಸ್ವತಂತ್ರ ರಿಪೇರಿ ಕಾರ್ಯಕ್ರಮವನ್ನು 200 ದೇಶಗಳಿಗೆ ವಿಸ್ತರಿಸುವುದಾಗಿ ಮತ್ತು ಅಸಲಿ ಬಿಡಿಭಾಗಗಳನ್ನು ಅಗತ್ಯಕ್ಕೆ ತಕ್ಕಂತೆ ಒದಗಿಸಲು ಹಾಗೂ ಮಾಹಿತಿ ನೀಡುವುದಾಗಿ ಆ್ಯಪಲ್ ಘೋಷಿಸಿದೆ. ಮೈಕ್ರೊಸಾಫ್ಟ್​ ಸಹ ಒಂದು ಮಟ್ಟಿಗೆ ಈ ನಿಟ್ಟಿನಲ್ಲಿ ಜನರ ಹಕ್ಕೊತ್ತಾಯಕ್ಕೆ ಮಣಿದಿದೆ. ಥರ್ಡ್​ ಜನರೇಶನ್ ಸರ್ಫೇಸ್​ ಲ್ಯಾಪ್​ಟಾಪ್​ಗಳಲ್ಲಿ ಬ್ಯಾಟರಿ ಹಾಗೂ ಹಾರ್ಡ್​ಡ್ರೈವ್​ ಗುಣಮಟ್ಟವನ್ನು ಸುಧಾರಿಸಲಾಗಿದ್ದು, ಹಲವು ವರ್ಷಗಳವರೆಗೆ ಬಾಳಿಕೆ ಬರುವಂತೆ ರೂಪಿಸಲಾಗಿದೆ ಎಂದು ಹೇಳಿದೆ.

ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳಲ್ಲಿ ರಿಪೇರಿ ಹಕ್ಕು ಬೇಕೆಂಬ ಆಗ್ರಹ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ. ಅಲ್ಲಿನ ಸರ್ಕಾರಗಳು ಸಹ ಈ ಆಂದೋಲನಕ್ಕೆ ಮಣಿದು, ತಂತ್ರಜ್ಞಾನ ಕಂಪನಿಗಳ ನೀತಿ ಬದಲಾಗಲೇಬೇಕಾದ ಅನಿವಾರ್ಯತೆ ಸೃಷ್ಟಿಸುವ ಕಾನೂನುಗಳನ್ನು ಜಾರಿಗೊಳಿಸುತ್ತಿವೆ. ಆದರೆ ಭಾರತದಲ್ಲಿ ಇನ್ನೂ ಈ ಆಂದೋಲನ ಚುರುಕಾಗಬೇಕಿದೆ.

(Right to Repair Movement Gaining momentum in America and Europe What is this all about)

ಇದನ್ನೂ ಓದಿ: Explainer: ಹೆಜ್ಜೆ ಮುಂದಿಟ್ಟರೆ ರಕ್ತಪಾತ, ಹಿಂದಿಟ್ಟರೆ ಅವಮಾನ: ಅಡಕತ್ತರಿಯಲ್ಲಿ ರಷ್ಯಾ-ಉಕ್ರೇನ್ ಅಧ್ಯಕ್ಷರು

ಇದನ್ನೂ ಓದಿ: Explainer: ಪುರಾತತ್ವಶಾಸ್ತ್ರದ ಮಹಾನ್ ಸಾಧಕ ಶಿಕಾರಿಪುರ ರಂಗನಾಥರಾವ್ ಅವರ 10 ಕೊಡುಗೆಗಳ ಪರಿಚಯ ಇಲ್ಲಿದೆ

Published On - 7:29 pm, Mon, 12 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ