ಅಮೇರಿಕಾದಲ್ಲಿ ಹೆಚ್ಚುತ್ತಿದೆ ಶೂಟೌಟ್ ಪ್ರಕರಣ; ಗ್ಯಾಸ್​​ ಸ್ಟೇಷನ್​ನಲ್ಲಿ ಗುಂಡು ಹಾರಿಸಿ ದರೋಡೆ ಮಾಡಿದ 12 ವರ್ಷದ ಬಾಲಕ

| Updated By: shivaprasad.hs

Updated on: Jun 05, 2022 | 10:22 AM

ಅಮೇರಿಕಾದಲ್ಲಿ ಶೂಟೌಟ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ 12 ವರ್ಷದ ಬಾಲಕನೊಬ್ಬ ಗನ್​ ತೋರಿಸಿ ದರೋಡೆ ಮಾಡಿದ ಘಟನೆ ನಡೆದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನೆಯ ವಿವರ ಇಲ್ಲಿದೆ.

ಅಮೇರಿಕಾದಲ್ಲಿ ಹೆಚ್ಚುತ್ತಿದೆ ಶೂಟೌಟ್ ಪ್ರಕರಣ; ಗ್ಯಾಸ್​​ ಸ್ಟೇಷನ್​ನಲ್ಲಿ ಗುಂಡು ಹಾರಿಸಿ ದರೋಡೆ ಮಾಡಿದ 12 ವರ್ಷದ ಬಾಲಕ
ಗ್ಯಾಸ್​ ಸ್ಟೇಷನ್​ನಲ್ಲಿ ಗನ್ ತೋರಿಸುತ್ತಿರುವ ಬಾಲಕ (ವಿಡಿಯೋದಿಂದ ಸೆರೆಹಿಡಿದ ಚಿತ್ರ)
Image Credit source: Picture: Hartford Police/WWMT
Follow us on

ಅಮೇರಿಕಾದಲ್ಲಿ ಶೂಟೌಟ್ (Shootout) ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ 12 ವರ್ಷದ ಬಾಲಕನೊಬ್ಬ ಗನ್​ ತೋರಿಸಿ ದರೋಡೆ ಮಾಡಿದ ಘಟನೆ ನಡೆದಿದೆ. ಈ ಘಟನೆಯ ಸಿಸಿಟಿವಿಯ ದೃಶ್ಯಾವಳಿಗಳು ಸೆರೆಯಾಗಿದ್ದು, ಸದ್ಯ ವೈರಲ್ ಆಗಿವೆ. ಜೂನ್​ 1ರಂದು ಮಧ್ಯಾಹ್ನದ ಸುಮಾರಿಗೆ ಪ್ರಕರಣ ನಡೆದಿದೆ. ಗ್ಯಾಸ್ ಸ್ಟೇಷನ್​​ ಒಂದರಲ್ಲಿ ಕೆಲವರು ಸಾಲು ಗಟ್ಟಿ ನಿಂತಿರುತ್ತಾರೆ. ತನ್ನ ಸರದಿ ಬಂದಾಗ ಬಾಲಕ ಗನ್​ ತೆಗೆದು, ಚೀಲವನ್ನು ನೀಡಿ ಅದಕ್ಕೆ ಹಣ ತುಂಬಿಸುವಂತೆ ಸೂಚಿಸಿದ್ದಾನೆ. ಆಗ ಅಂಗಡಿಯಾಕೆ ‘ಗಂಭೀರವಾಗಿ ಈ ಮಾತನ್ನು ಹೇಳುತ್ತಿದ್ದೀಯಾ?’ ಎಂದು ಪ್ರಶ್ನಿಸಿದ್ದಾರೆ. ಆಗ ಬಾಲಕ ಅಂಗಡಿಯ ಛಾವಣಿಗೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ಆಗ ಮಹಿಳೆ ನೀಲಿ ಚೀಲವೊಂದನ್ನು ನೀಡಿ ಆ ಬಾಲಕನನ್ನು ತಕ್ಷಣ ಅಲ್ಲಿಂದ ಹೊರಹೋಗುವಂತೆ ಕೋರಿದ್ದಾಳೆ. ಅಲ್ಲಿಂದ ಆತ ಹೊರಹೋಗಿದ್ದಾನೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮಿಚಿಗನ್​ನ ಹಾರ್ಟ್​ಫೋರ್ಡ್​​​ನ​ ಗ್ಯಾಸ್ ಸ್ಟೇಷನ್​​ನಲ್ಲಿ ಪ್ರಕರಣ ನಡೆದಿದೆ. ಆ ಬಾಲಕ 5,000 ಅಮೇರಿಕನ್ ಡಾಲರ್​ನೊಂದಿಗೆ ಗ್ಯಾಸ್ ಸ್ಟೇಷನ್​ನಿಂದ ತೆರಳಿದ್ದಾನೆ. ಕೆಲವೇ ಸಮಯದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ.

ಹಾರ್ಟ್‌ಫೋರ್ಡ್ ಪೋಲೀಸ್ ಲೆಫ್ಟಿನೆಂಟ್ ಮೈಕೆಲ್ ಪ್ರಿನ್ಸ್ ಈ ಕುರಿತು ಮಾಹಿತಿ ನೀಡಿ ‘‘ಆ ಬಾಲಕ ಶಾಲೆಯಲ್ಲಿ ಶಸ್ತ್ರಸಜ್ಜಿತವಾಗಿ ದರೋಡೆ ಮಾಡುವ ಬಗ್ಗೆ ಆ ದಿನ ಸಹಪಾಠಿಯೊಂದಿಗೆ ಮಾತನಾಡಿದ್ದ. ಆದರೆ ಇದನ್ನು ನಿಜವೆಂದು​ ಮತ್ತೋರ್ವ ವಿದ್ಯಾರ್ಥಿ ಭಾವಿಸಿರಲಿಲ್ಲ’’ ಎಂದಿದ್ದಾರೆ. ಈ ಬಗ್ಗೆ WWMT ವರದಿ ಮಾಡಿದೆ.

ತಂದೆಯ ಬಂದೂಕನ್ನು ಆ ಬಾಲಕ ತಂದಿದ್ದಾನೆ. ಆಯುಧಗಳನ್ನು ಕಂಡುಹಿಡಿಯುವ ಹಾಗೂ ಅಪಾಯದ ಮುನ್ಸೂಚನೆ ನೀಡುವ ಉಪಕರಣಗಳಿಲ್ಲದ, ಕಡಿಮೆ ಭದ್ರತೆಯಿರುವ ಗ್ಯಾಸ್​​ ಸ್ಟೇಷನ್​ಗೆ ಆತ ಪ್ರವೇಶಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ
ಉಕ್ರೇನ್​ಗೆ ಭೇಟಿ ನೀಡುವ ಸಾಧ್ಯತೆ ಬಗ್ಗೆ ಆ ದೇಶದ ಅಧಿಕಾರಿಗಳೊಂದಿಗೆ ಪೋಪ್ ಫ್ರಾನ್ಸಿಸ್ ಇಷ್ಟರಲ್ಲೇ ಚರ್ಚಿಸಲಿದ್ದಾರೆ
ರಷ್ಯಾದಿಂದ ತೈಲ ಆಮದನ್ನು ಸಮರ್ಥಿಸಿಕೊಂಡ ವಿದೇಶಾಂಗ ಸಚಿವ ಜೈಶಂಕರ್, ಟೀಕೆಗಳಿಗೆ ತಿರುಗೇಟು
ಪುಟಿನ್​​ ಗರ್ಲ್​​ಫ್ರೆಂಡ್​​ಗೆ ಗೌರವಾರ್ಥವಾಗಿ ‘ಅಲೀನಾ ಫೆಸ್ಟಿವಲ್’ ನಡೆಸಿದ ರಷ್ಯಾ: ವರದಿ
ಅಪರೂಪಕ್ಕೆ ಕ್ಯಾಲೊಫೋರ್ನಿಯಾದಿಂದ ಹೊರಬಿದ್ದ ಹ್ಯಾರಿ-ಮೇಘನಾ ದಂಪತಿ ರಾಣಿ ಎಲಿಜಬೆತ್​ರ ಜುಬಿಲೀ ಪರೇಡಲ್ಲಿ ಪಾಲ್ಗೊಂಡರು!

ಬಾಲಕ ದರೋಡೆ ಮಾಡಿದ್ದಕ್ಕೆ ಖಚಿತವಾದ ಕಾರಣಗಳು ತಿಳಿದುಬಂದಿಲ್ಲ. ವರದಿಗಳ ಪ್ರಕಾರ ಆತ ಹಣಕ್ಕಾಗಿ ದರೋಡೆ ಮಾಡಿಲ್ಲ. ಆದರೆ ಕಳ್ಳತನ ಮಾಡಿದ್ದಕ್ಕೆ ಕಾರಣಗಳನ್ನೂ ತಿಳಿಸಿಲ್ಲ. ಆತನ ಮನಸ್ಸಿನಲ್ಲಿ ಏನು ಓಡುತ್ತಿತ್ತು ಎಂಬುದರ ಬಗ್ಗೆ ಸ್ಪಷ್ಟವಾದ ಅರಿವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಶಾಲೆ ಮುಗಿದ ಬಳಿಕ ಬಾಲಕನಿಗೆ ಬಂದೂಕು ಸಿಕ್ಕಿದ್ದರಿಂದ ಮಕ್ಕಳಿಗೆ ಅಪಾಯವಾಗಿಲ್ಲ. ಆದರೆ ಇಂತಹ ಪ್ರಕರಣಗಳನ್ನು ಹೆಚ್ಚಾಗಿ ನೋಡುತ್ತಿದ್ದೇವೆ ಎಂದು ಮೈಕೆಲ್ ಪ್ರಿನ್ಸ್​ ಹೇಳಿದ್ದಾರೆ. ಇದೀಗ ಆ ಬಾಲಕನ ಮೇಲೆ ಸಶಸ್ತ್ರ ದರೋಡೆ, ಅಪಾಯಕಾರಿ ಆಯುಧದಿಂದ ಹಲ್ಲೆ, ಕಟ್ಟಡದಲ್ಲಿ ಬಂದೂಕು ಬಳಕೆ ಸೇರಿದಂತೆ ಒಟ್ಟು ಆರು ಆರೋಪಗಳನ್ನು ಹೊರಿಸಲಾಗಿದೆ.

ಘಟನೆಯ ವಿಡಿಯೋ: (ವಿಡಿಯೋ ಕೃಪೆ: MLive)

ಅಮೇರಿಕಾದಲ್ಲಿ ಬಂದೂಕಿನ ಬಳಕೆ ಹಾಗೂ ಮಕ್ಕಳು ಅದನ್ನು ಬಳಸುತ್ತಿರುವುದು ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಅಲ್ಲಿ ಹಲವು ಬಾರಿ ಶೂಟೌಟ್ ಪ್ರಕರಣಗಳು ನಡೆದಿದ್ದು ಎಲ್ಲರನ್ನೂ ಆತಂಕಕ್ಕೆ ತಳ್ಳಿವೆ. ಈ ವರ್ಷ 10ಕ್ಕೂ ಹೆಚ್ಚು ಶೂಟೌಟ್ ಪ್ರಕರಣಗಳು ವರದಿಯಾಗಿವೆ. ಮೇ 24ರಂದು ಟೆಕ್ಸಾಸ್​ನ ಶಾಲೆಯೊಂದರಲ್ಲಿ 18 ವರ್ಷದ ಬಾಲಕ ನಡೆಸಿದ್ದ ಶೂಟೌಟ್​ನಲ್ಲಿ 19 ಮಕ್ಕಳು ಹಾಗೂ 2 ಶಿಕ್ಷಕರು ಮೃತಪಟ್ಟಿದ್ದರು. 10 ದಿನಗಳ ಹಿಂದೆ ನ್ಯೂಯಾರ್ಕ್​ನ ಸೂಪರ್ ಮಾರ್ಕೆಟ್ ಒಂದರಲ್ಲಿ ಮತ್ತೋರ್ವ 18 ವರ್ಷದ ಬಾಲಕ ನಡೆಸಿದ್ದ ಶೂಟೌಟ್​ನಲ್ಲಿ 10 ಜನ ಮರಣವನ್ನಪ್ಪಿದ್ದರು. ಈ ವಾರ ಒಕ್ಲಹೋಮಾದಲ್ಲಿ 45 ವರ್ಷದ ವ್ಯಕ್ತಿ ಶೂಟೌಟ್ ನಡೆಸಿ 4 ಜನರನ್ನು ಕೊಂದಿದ್ದ. ಈ ಬೆಳವಣಿಗೆಗಳು ಸದ್ಯ ಅಮೇರಿಕಾದಲ್ಲಿ ಆತಂಕ ಹೆಚ್ಚಳಕ್ಕೆ ಕಾರಣವಾಗಿವೆ.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 am, Sun, 5 June 22