ಅಂದ್ರಾಬ್ನಲ್ಲಿ ತಾಲಿಬಾನ್ ಜಿಲ್ಲಾ ಮುಖ್ಯಸ್ಥ ಸೇರಿ 50 ಉಗ್ರರನ್ನು ಕೊಂದ ಸ್ಥಳೀಯ ಹೋರಾಟಗಾರರು
ಕಳೆದ ವಾರ ಉತ್ತರ ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿರುವ ಬಾನೋ, ದೆಹ್ ಸಾಲೇಹ್ ಮತ್ತು ಪುಲ್ ಇ ಹೇಸಾರ್ ಜಿಲ್ಲೆಗಳನ್ನು ಸ್ಥಳೀಯರಿಂದ ಮತ್ತೆ ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನದ ಅಂದ್ರಾಬ್ ಪ್ರದೇಶದಲ್ಲಿ ತಾಲಿಬಾನ್ ಉಗ್ರರು ಮತ್ತು ಸ್ಥಳೀಯ ಹೋರಾಟಗಾರರ ನಡುವೆ ಘರ್ಷಣೆ ನಡೆದು, ಬಾನು ಜಿಲ್ಲೆಯ ತಾಲಿಬಾನ್ ಮುಖ್ಯಸ್ಥ ಮತ್ತು ಆತನ ಮೂವರು ಸಹಚರರು ಹತ್ಯೆಯಾಗಿದ್ದಾರೆ. ಹಾಗೇ ಇಲ್ಲಿನ ಮಧ್ಯಾಹ್ನದ ಪ್ರಾರ್ಥನೆ ಸಲ್ಲಿಸುವ ಸ್ಥಳದಲ್ಲಿ ಜನರು ಹೊಂಚುಹಾಕಿ ನಿಂತು 50 ತಾಲಿಬಾನ್ ನುಸುಳುಕೋರರನ್ನು ಕೊಂದಿದ್ದಾರೆ ಮತ್ತು ಅವರಲ್ಲಿ 20 ಜನರನ್ನು ಬಂಧಿಸಿ, ಸೆರೆಯಲ್ಲಿಟ್ಟಿದ್ದಾರೆ. ಹಾಗೇ, ಸ್ಥಳೀಯ ಪ್ರತಿರೋಧ ಗುಂಪಿನ ಒಬ್ಬ ತಾಲಿಬಾನಿಗಳ ದಾಳಿಗೆ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಹಾಗೇ, ಪಂಜಶಿರ್ ವಶಪಡಿಸಿಕೊಳ್ಳಲು ತೆರಳಿರುವ ತಾಲಿಬಾನ್ ಉಗ್ರರಿಗೂ ಅಲ್ಲಿನ ಜನರು ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ. ಅಷ್ಟಲ್ಲದೆ, ಪಂಜ್ಶಿರ್ಗೆ ತಜಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಪೂರೈಕೆಯಾಗುತ್ತಿದೆ ಎನ್ನಲಾಗಿದೆ. ತಾಲಿಬಾನ್ ಉಗ್ರರೂ ಕೂಡ ಒಮ್ಮೆಲೇ ಹಿಂಸಾಚಾರ ಶುರು ಮಾಡದೆ, ಪಂಜ್ಶಿರ್ನ್ನು ಸುತ್ತುವರಿದು ನಿಂತು ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸಮಸ್ಯೆಯನ್ನು ಮಾತುಕತೆ ಮೂಲಕ, ಶಾಂತಿಯುತವಾಗಿ ಪರಿಹಾರ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಮತ್ತೆ ಮೂರು ಜಿಲ್ಲೆಗಳು ತಾಲಿಬಾನ್ ವಶ ಕಳೆದ ವಾರ ಉತ್ತರ ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿರುವ ಬಾನೋ, ದೆಹ್ ಸಾಲೇಹ್ ಮತ್ತು ಪುಲ್ ಇ ಹೇಸಾರ್ ಜಿಲ್ಲೆಗಳನ್ನು ಸ್ಥಳೀಯ ಹೋರಾಟಗಾರರು ತಾಲಿಬಾನಿಗಳ ವಶದಿಂದ ಬಿಡಿಸಿಕೊಂಡಿದ್ದರು. ಆದರೆ ಇದೀಗ ತಾಲಿಬಾನಿಗಳು ಮತ್ತೆ ಆ ಜಿಲ್ಲೆಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಒಂದು ತಿಂಗಳಿಂದಲೂ ಅಲ್ಲಲ್ಲಿ ಕೆಲವು ಪ್ರಾಂತ್ಯಗಳನ್ನು ವಶಪಡಸಿಕೊಳ್ಳುತ್ತ ಬಂದಿದ್ದ ತಾಲಿಬಾನ್ ಉಗ್ರರು ಆಗಸ್ಟ್ 15ರಂದು ಅಫ್ಘಾನ್ ರಾಜಧಾನಿ ಕಾಬೂಲ್ನ್ನು ವಶಪಡಿಸಿಕೊಳ್ಳುವ ಮೂಲಕ ಇಡೀ ಅಫ್ಘಾನಿಸ್ತಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದಿದ್ದಾರೆ. ಅಮೆರಿಕ ಸೈನ್ಯ ಸಂಪೂರ್ಣವಾಗಿ ವಾಪಸ್ ಹೋಗುವವರೆಗೂ ಇಲ್ಲಿ ಸರ್ಕಾರ ರಚನೆ ಮಾಡುವುದಿಲ್ಲ ಎಂದು ತಾಲಿಬಾನ್ ಹೇಳಿಕೊಂಡಿದೆ.
ಇದನ್ನೂ ಓದಿ: ತಾಲಿಬಾನ್ ವಿರುದ್ಧ ಸೆಟೆದು ನಿಲ್ಲಲು ಹೆಲಿಕಾಪ್ಟರ್ ಸಮೇತ ಮರಳಿ ಬಂಧ ಯೋಧರು; ಪಂಜ್ಶೀರ್ ಪ್ರಾಂತ್ಯಕ್ಕೆ ಆಗಮನ
ಕೊಡಗು ಸ್ಪೆಷಲ್ ಚಿಕನ್ ಕೀಮಾ ಬಾಲ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
Published On - 9:35 am, Tue, 24 August 21