ಫೈಜರ್ ಬಯೋಎನ್ಟೆಕ್ ಲಸಿಕೆಗೆ ಸಂಪೂರ್ಣ ಅನುಮೋದನೆ ನೀಡಿದ ಎಫ್‌ಡಿಎ; ಸುರಕ್ಷಿತ ಲಸಿಕೆ ಎಂಬ ಹೆಗ್ಗಳಿಕೆ
ಸದರಿ ಲಸಿಕೆಯು ಈಗ ಕಾಮಿರ್ನಾಟಿ ಎಂಬ ಹೆಸರಿನಡಿಯಲ್ಲಿ ಮಾರಾಟವಾಗುತ್ತಿದ್ದು, ಸಂಪೂರ್ಣ ಅನುಮೋದನೆ ಪಡೆದ ಮೊದಲನೆ ಕೊರೊನಾ ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಿಸೆಂಬರ್ 11, 2020 ರಂದು ನೀಡಲಾದ ತುರ್ತು ಬಳಕೆಯ ದೃಢೀಕರಣದ (EUA) ಅಡಿಯಲ್ಲಿ ಈಗಾಗಲೇ 200 ದಶಲಕ್ಷಕ್ಕೂ ಹೆಚ್ಚು ಡೋಸ್ಗಳನ್ನು ವಿತರಿಸಲಾಗಿತ್ತು.
ಕಳೆದ ಒಂದೂವರೆ ವರ್ಷಕ್ಕೂ ಅಧಿಕ ಸಮಯದಿಂದ ಜಗತ್ತನ್ನು ಭಾದಿಸುತ್ತಿರುವ ಕೊರೊನಾ ವೈರಾಣು ವಿರುದ್ಧ ಹೋರಾಡಲು ಈಗಾಗಲೇ ಅನೇಕ ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬೇರೆ ಬೇರೆ ದೇಶಗಳಲ್ಲಿ ಲಸಿಕೆ ತಯಾರಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಲಸಿಕೆಯೊಂದಕ್ಕೆ ಸಂಪೂರ್ಣ ಅನುಮೋದನೆ ನೀಡಿದ್ದು ಅದು ಸುರಕ್ಷಿತ ಎಂದು ತಿಳಿಸಿದೆ. ಫೈಜರ್ ಬಯೋಎನ್ಟೆಕ್ ತಯಾರಿಸಿದ ಕೊರೊನಾ ಲಸಿಕೆಗೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪೂರ್ಣ ಅನುಮತಿ ನೀಡಿದ್ದು, ಇದು ಡೆಲ್ಟಾ ರೂಪಾಂತರಿ ವೈರಾಣುವಿನ ವಿರುದ್ಧವೂ ಸಶಕ್ತವಾಗಿ ಹೋರಾಡಬಲ್ಲದು ಎಂದು ಅಭಿಪ್ರಾಯಪಟ್ಟಿದೆ.
ಅಮೆರಿಕಾ ದೇಶದಲ್ಲಿ ಸುಮಾರು ಶೇ.52 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇಲ್ಲಿಯ ತನಕ ಲಸಿಕೆ ಸ್ವೀಕರಿಸದವರೇ ಆರೋಗ್ಯ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದ್ದು, ಇದು ಲಸಿಕಾ ಅಭಿಯಾನಕ್ಕೆ ಬಹುದೊಡ್ಡ ಹಿನ್ನೆಡೆಯಾಗಿದೆ. ನಾವು ಕೊರೊನಾ ರೋಗದ ವಿರುದ್ಧ ಹೋರಾಡುತ್ತ ಇರುವಾಗಲೇ ಲಸಿಕೆಗೆ ಎಫ್‌ಡಿಎ ಸಂಪೂರ್ಣ ಅನುಮೋದನೆ ನೀಡಿರುವುದು ಒಂದು ಮೈಲಿಗಲ್ಲು. ಇದು ಲಸಿಕೆ ಅಭಿಯಾನ ವೇಗವಾಗಲು ಮತ್ತಷ್ಟು ಸಹಕಾರಿ ಎಂದು ಎಫ್‌ಡಿಎ ಆಯುಕ್ತ ಜಾನೆಟ್ ವುಡ್‌ಕಾಕ್ ಹೇಳಿಕೆ ನೀಡಿದ್ದಾರೆ.
ಅಮೆರಿಕಾದಲ್ಲಿ ಲಭ್ಯವಿರುವ ಎಲ್ಲಾ ಮೂರು ಕೊವಿಡ್ ಲಸಿಕೆಗಳು ತುರ್ತು ಬಳಕೆಗಾಗಿ ಎಫ್‌ಡಿಎಯ ಕಟ್ಟುನಿಟ್ಟಾದ ಮಾನದಂಡಗಳನ್ನು ಪೂರೈಸಿದ್ದರೂ ಎಫ್‌ಡಿಎ ನೀಡುವ ಪರಿಪೂರ್ಣ ಅನುಮೋದನೆಯು ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬ ವಿಶ್ವಾಸವನ್ನು ನೀಡುತ್ತದೆ. ಇನ್ನೂ ಲಸಿಕೆ ಹಾಕಿಸಿಕೊಳ್ಳದವರು ಈಗ ನಿಶ್ಚಿಂತವಾಗಿ ಲಸಿಕೆ ಸ್ವೀಕರಿಸಲು ಇದು ಸರಿಯಾದ ಸಮಯ ಎಂದು ಅಧ್ಯಕ್ಷ ಜೋ ಬೈಡೆನ್ ಟ್ವೀಟ್ ಮಾಡಿದ್ದಾರೆ.
ಸದರಿ ಲಸಿಕೆಯು ಈಗ ಕಾಮಿರ್ನಾಟಿ ಎಂಬ ಹೆಸರಿನಡಿಯಲ್ಲಿ ಮಾರಾಟವಾಗುತ್ತಿದ್ದು, ಸಂಪೂರ್ಣ ಅನುಮೋದನೆ ಪಡೆದ ಮೊದಲನೆ ಕೊರೊನಾ ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಿಸೆಂಬರ್ 11, 2020 ರಂದು ನೀಡಲಾದ ತುರ್ತು ಬಳಕೆಯ ದೃಢೀಕರಣದ (EUA) ಅಡಿಯಲ್ಲಿ ಈಗಾಗಲೇ 200 ದಶಲಕ್ಷಕ್ಕೂ ಹೆಚ್ಚು ಡೋಸ್ಗಳನ್ನು ವಿತರಿಸಲಾಗಿತ್ತು. 16 ವರ್ಷ ಮತ್ತು ಅದಕ್ಕಿಂತ ಅಧಿಕ ವಯಸ್ಸಿನ ಜನರಲ್ಲಿ ಇದು ಪರಿಣಾಮಕಾರಿ ಎಂದು ಕ್ಲಿನಿಕಲ್ ಪ್ರಯೋಗದ ಅಂಶಗಳು ದೃಢಪಡಿಸಿದ್ದು, ಇದು ಕೋವಿಡ್ ತಡೆಗಟ್ಟುವಲ್ಲ 90 ಪ್ರತಿಶತಕ್ಕಿಂತ ಹೆಚ್ಚು ಸಶಕ್ತ ಎಂದೂ ಅಭಿಪ್ರಾಯಪಟ್ಟಿದೆ.
ಒಟ್ಟಾರೆಯಾಗಿ ಸದರಿ ಲಸಿಕೆ ಪಡೆದ ಸರಿಸುಮಾರು 12,000 ಜನರನ್ನು ಕನಿಷ್ಠ ಆರು ತಿಂಗಳ ಕಾಲ ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ಎಫ್‌ಡಿಎ ತನ್ನ ಹೇಳಿಕೆಯಲ್ಲಿ ತಿಳಿಸಿದ್ದು, ಸಾಮಾನ್ಯವಾಗಿ ವರದಿಯಾದ ಅಡ್ಡಪರಿಣಾಮಗಳಲ್ಲಿ ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ನೋವು, ಕೆಂಪು, ಊತ, ಆಯಾಸ, ತಲೆನೋವು, ಸ್ನಾಯು ಅಥವಾ ಕೀಲು ನೋವು, ಶೀತ ಮತ್ತು ಜ್ವರ ಕಾಣಿಸಿಕೊಂಡಿದ್ದು ಬಿಟ್ಟರೆ ತೀರಾ ಗಂಭೀರ ತೊಂದರೆ ಕಾಣಿಸಿಲ್ಲ.
ಇಲ್ಲಿಯವರೆಗಿನ ಅಂಕಿಅಂಶಗಳು ಮಹಿಳೆಯರು ಮತ್ತು ಹಿರಿಯ ಪುರುಷರಿಗೆ ಹೋಲಿಸಿದರೆ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರಲ್ಲಿ ಮತ್ತು 12 ರಿಂದ 17 ವರ್ಷ ವಯಸ್ಸಿನ ಹುಡುಗರಲ್ಲಿ ಹೆಚ್ಚಿನ ಅಪಾಯ ಇರುವುದನ್ನು ತೋರಿಸಿಕೊಟ್ಟಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಹೆಚ್ಚಿನ ವ್ಯಕ್ತಿಗಳು ಚೇತರಿಸಿಕೊಳ್ಳುತ್ತಿದ್ದು ಕೆಲವರಿಗೆ ಮಾತ್ರ ತೀವ್ರ ನಿಗಾ ಅಗತ್ಯವಿದೆ ಎಂದು ತಿಳಿಸಿದೆ.
ಕೆಲವೇ ದಿನಗಳಲ್ಲಿ ಲಸಿಕೆಯನ್ನು ಸಂಪೂರ್ಣ ಕಡ್ಡಾಯಗೊಳಿಸುವುದಾಗಿ ಯುಎಸ್ ಮಿಲಿಟರಿ ಹೇಳಿದ್ದು, ಖಾಸಗಿ ಉದ್ಯಮಗಳು ಮತ್ತು ವಿಶ್ವವಿದ್ಯಾನಿಲಯಗಳು ಅದಕ್ಕೆ ಸಮ್ಮತಿಯನ್ನೂ ಸೂಚಿಸಿವೆ. ಲಸಿಕೆ ಕಡ್ಡಾಯ ಎಂದು ಘೋಷಣೆಯಾದ ತಕ್ಷಣ ನ್ಯೂಯಾರ್ಕ್ನಲ್ಲಿ ಎಲ್ಲಾ ಶಿಕ್ಷಣ ಇಲಾಖೆಯ ನೌಕರರು ಸೆಪ್ಟೆಂಬರ್ 27 ರೊಳಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆಯಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.
ಇದು ಪ್ರಾಯೋಗಿಕ ಲಸಿಕೆ ಎಂದು ತಪ್ಪಾಗಿ ಅರ್ಥೈಸಿ ಲಸಿಕೆ-ವಿರೋಧಿ ಚಳುವಳಿ ನಡೆಸಿದವರಿಗೆ ಈಗ ಎಫ್‌ಡಿಎ ವರದಿಯಿಂದ ದೊಡ್ಡ ಹಿನ್ನೆಡೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಸೆಂಟರ್ ಫಾರ್ ಹೆಲ್ತ್ ಸೆಕ್ಯುರಿಟಿಯ ಅಮೇಶ್ ಅಡಲ್ಜಾ ಎಎಫ್‌ಪಿಗೆ ತಿಳಿಸಿದ್ದಾರೆ. ಈಗ ಜನರು ಪೂರ್ಣ ಭರವಸೆಯೊಂದಿಗೆ ಲಸಿಕೆ ಹಾಕಿಸಿಕೊಳ್ಳಲಿ ಎಂದು ಅಪೇಕ್ಷಿಸುತ್ತೇವೆ. ಯುಎಸ್ನಲ್ಲಿ ಸುಮಾರು 6,28,000ಕ್ಕೂ ಹೆಚ್ಚು ಜನರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇದು ಅಧಿಕೃತವಾಗಿ ವಿಶ್ವದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ದೇಶ. ಆದರೂ ತಜ್ಞರು ಹೇಳುವಂತೆ ಭಾರತ ಈ ದಾಖಲೆಯನ್ನು ಮುರಿಯುವ ಸಾಧ್ಯತೆಯೂ ಇದೆ ಎಂದಿದ್ದಾರೆ.
(US FDA grants full approval to Pfizer BioNtech Corona Vaccine)
ಇದನ್ನೂ ಓದಿ: Covid Vaccine: 12 ವರ್ಷ ಮೇಲ್ಪಟ್ಟವರಿಗೆ ಶೀಘ್ರದಲ್ಲೇ ಕೊವಿಡ್ ಲಸಿಕೆ; ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲ ಆದ್ಯತೆ
ಅಫ್ಘಾನ್ನಿಂದ ಇಂದು ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು; ಆಸ್ಪತ್ರೆಗೆ ದಾಖಲು